ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್‌ದೇವ್ ಟೀಮ್ ಇಂಡಿಯಾ ಆಟಗಾರರ ವರ್ತನೆಯ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ ಕೆಲ ಕಟು ಪದಗಳನ್ನು ಬಳಸಿ ಟೀಕಿಸಿದ್ದರು. ಆಟಗಾರರು ತಮಗೆಲ್ಲಾ ತಿಳಿದಿದೆ ಎಂದು ಭಾವಿಸಿಕೊಂಡಿದ್ದು ಹಿರಿಯರಿಂದ ಕೇಳಿ ತಿಳಿದುಕೊಳ್ಳುವುದು ಏನಿಲ್ಲ ಎನ್ನುವಂತಿದ್ದಾರೆ, ಹಾಗೂ ಐಪಿಎಲ್‌ನಿಂದಾಗಿ ಭಾರತೀಯ ಕ್ರಿಕೆಟಿಗರಿಗೆ ಅಹಂಕಾರ ಬಂದಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಕಪಿಲ್ ದೇವ್ ಅವರ ಈ ಹೇಳಿಕೆ ಸಾಕಷ್ಟು ಸದ್ದು ಮಾಡಿದೆ. ಈ ವಿಚಾರವಾಗಿ ಟೀಮ್ ಇಂಡಿಯಾದ ಹಿರಿಯ ಆಟಗಾರ ರವೀಂದ್ರ ಜಡೇಜಾ ತಮ್ಮ ಪ್ರತಿಕ್ರಿಯೆ ನೀಡಿದ್ದು ಖಡಕ್ ಉತ್ತರ ನೀಡಿದ್ದಾರೆ.
ರವೀಂದ್ರ ಜಡೇಜಾ ಮಾಜಿ ನಾಯಕನ ಹೇಳಿಕೆಗೆ ಇಂಥಾ ಅಭಿಪ್ರಾಯಗಳು ಭಾರತ ತಂಡ ಸೋಲು ಅನುಭವಿಸಿದಾಗ ಮಾತ್ರ ಕೇಳಿಬರುತ್ತದೆ ಎಂದಿದ್ದು ಆಟಗಾರರುತಮ್ಮ ದೇಶವನ್ನು ಪ್ರತಿನಿಧಿಸಲು ಮುಡಿಪಾಗಿಟ್ಟಿದ್ದು ಅದರೆಡೆಗೆ ತಮ್ಮ ಎಲ್ಲಾ ಚಿತ್ತವನ್ನು ನೆಟ್ಟಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ನನಗೆ ಅವರು ಯಾವಾಗ ಈ ಮಾತುಗಳನ್ನು ಹೇಳಿದ್ದಾರೆ ಎಂದು ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಾನು ಹೆಚ್ಚಿನ ಅಂಶಗಳನ್ನು ಹುಡುಕಾಡುವುದಿಲ್ಲ. ಎಲ್ಲರಿಗೂ ಕೂಡ ಅವರದ್ದೇ ಆದ ಅಭಿಪ್ರಾಯಗಳು ಇರುತ್ತವೆ. ಅವರು ಹೇಳಿದ ರೀತಿ ಇಲ್ಲ. ಎಲ್ಲರೂ ಕೂಡ ಅವರ ಆಟವನ್ನು ಆನಂದಿಸುತ್ತಿದ್ದು ಕಠಿಣ ಪರಿಶ್ರಮಪಡುತ್ತಿದ್ದಾರೆ. ಆಟಗಾರರು ತಂಡದಲ್ಲಿ ತಮಗೆ ದೊರೆತ ಸ್ಥಾನವನ್ನು ಲಘುವಾಗಿ ತೆಗೆದುಕೊಳ್ಳುವದಿಲ್ಲ. ಯಾವಾಗೆಲ್ಲಾ ಅವಕಾಶಗಳು ದೊರೆಯುತ್ತದೋ ಆಗ 100% ತಮ್ಮ ಶ್ರಮ ನೀಡುತ್ತಿದದು ತಂಡದ ಗೆಲುವಿಗೆ ಶ್ರಮಿಸುತ್ತಾರೆ" ಎಂದಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ.
"ಇಂಥಾ ಅಂಶಗಳು ಭಾರತ ತಂಡ ಸೋತಾಗ ಬರುತ್ತದೆ. ಯಾರೂ ಕೂಡ ಇಲ್ಲಿ ಅಹಂಕಾರಿಗಳಲ್ಲ. ಎಲ್ಲರೂ ಕೂಡ ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ. ನಾವೆಲ್ಲಾ ಕಠಿಣ ಪರಿಶ್ರಮಪಡುತ್ತಿದ್ದು ದೇಶಕ್ಕಾಗಿ ಆಡುತ್ತಿದ್ದೇವೆ. ಇಲ್ಲಿ ವೈಯಕ್ತಿಕವಾದ ಅಜೆಂಡಾಗಳು ಯಾವುದೂ ಇರುವುದಿಲ್ಲ" ಎಂದು ಕಪಿಲ್‌ದೇವ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ ಜಡೇಜಾ.
ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೆಲ ದಿನಗಳ ಹಿಂದೆ ಈಗಿನ ಕ್ರಿಕೆಟಿಗರು ತಮ್ಮಿಂದ ಯಾವುದೇ ಸಲಹೆಗಳನ್ನು ಪಡೆಯಲು ಮುಂದೆ ಬರುವುದಿಲ್ಲ ಎಂದು ಬೇಸರ ಹೊರಹಾಕಿದ್ದರು. ಅಲ್ಲದೆ ಈ ಹಿಂದೆ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ನಿರಂತರವಾಗಿ ಸಂಪರ್ಕದಲ್ಲಿದ್ದು ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರು ಎಂಬುದನ್ನು ಉಲ್ಲೇಖಿಸಿ ಹೊಸ ಪೀಳಿಗೆಯ ಆಟಗಾರರು ಯಾರು ಕೂಡ ತಮ್ಮ ಬಳಿ ಸಲಹೆಗಳನ್ನು ಪಡೆಯುವುದಿಲ್ಲ ಎಂದಿದ್ದರು.
ಸುನಿಲ್ ಗವಾಸ್ಕರ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆಯ ರೂಪದಲ್ಲಿ ಕಪಿಲ್ ದೇವ್ ತಮ್ಮ ಅನಿಸಿಕೆಯನ್ನು 'ದಿ ವೀಕ್' ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ. "ಈಗಿನ ಆಟಗಾರರ ಒಳ್ಳೆಯ ಅಂಶವೆಂದರೆ ಅವರೆಲ್ಲಾ ಬಹಳ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಋಣಾತ್ಮಕ ಅಂಶವೆಂದರೆ ತಮಗೆ ಎಲ್ಲಾ ತಿಳಿದಿದೆ ಎಂದು ಭಾವಿಸಿದ್ದಾರೆ. ಅದಕ್ಕಿಂತ ಹೆಚ್ಚಿನದನ್ನು ಅವರು ಹೇಗೆ ಸಾಧಿಸುತ್ತಾರೆ ಎನನ್ಉವುದು ನನಗೆ ತಿಳಿದಿಲ್ಲ. ಆದರೆ ಅವರು ಬಹಳ ಆತ್ಮವಿಶ್ವಾಸವನ್ನು ಹೊಂದಿದ್ದು ಬೇರೆ ಯಾರಲ್ಲಿಯೂ ಏನನ್ನೂ ಕೇಳಬಾರದು ಎಂದು ಕೊಂಡಿದ್ದಾರೆ. ನಾವು ಎಂದುಕೊಂಡಿದ್ದು ಏನೆಂದರೆ ಅನುಭವಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತಿದ್ದೆವು" ಎಂದು ಕಪಿಲ್ ದೇವ್ ಆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು.
ಮುಂದುವರಿದು ಅವರು "ಕೆಲ ಸಂದರ್ಭಗಳಲ್ಲಿ ಬಹಳ ಹಣ ಬಂದರೆ ಅದರ ಜೊತೆಗೆ ಅಹಂಕಾರವೂ ಬರುತ್ತದೆ. ಈ ಕ್ರಿಕೆಟಿಗರು ತಮಗೆ ಎಲ್ಲವೂ ಗೊತ್ತಿದೆ ಎಂದುಕೊಂಡಿದ್ದಾರೆ. ಅದುವೇ ಭಿನ್ನತೆ. ಸಹಾಯದ ಅಗತ್ಯವಿರುವ ಬಹಳ ಆಟಗಾರರು ಇದ್ದಾರೆ ಎಂದು ನಾನು ಹೇಳಬಲ್ಲೆ. ಸುನಿಲ್ ಗವಾಸ್ಕರ್ ಅವರಂಥಾ ಆಟಗಾರ ಇದ್ದಾಗ ಯಾಕೆ ನೀವು ಅವರಿಂದ ಸಹಾಯ ಕೇಳುವುದಿಲ್ಲ? ಅಹಂಕಾರ ಯಾಕೆ? ಅಷ್ಟು ಅಹಂಕಾರ ಇರಬಾರದು" ಎಮದಿದ್ದರು. ಕಪಿಲ್ ದೇವ್ ಅವರ ಈ ಹೇಳಿಕೆ ಈಗ ಸಾಕಷ್ಟು ಸದ್ದುಮಾಡುತ್ತಿದೆ.