ಟೀಮ್ ಇಂಡಿಯಾಗೆ ಇನ್ನು ವಿಶ್ವಕಪ್ ತಯಾರಿಗೆ ಕೆಲವೇ ಪಂದ್ಯಗಳು ಉಳಿದಿವೆ. ಸಿಕ್ಕ ಅವಕಾಶದಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಜವಾಬ್ದಾರಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಇದೆ. ಈಗಾಗಲೇ ಹಲವು ಸ್ಥಾನಗಳು ಫುಲ್ ಆಗಿದ್ದು ಬಾಕಿ ಇರುವ ಕೆಲವೇ ಸ್ಥಾನಗಳಿಗೆ ಆಟಗಾರರ ಹುಡುಕಾಟ ನಡೆದಿದೆ.
ಚುಟುಕು ಕ್ರಿಕೆಟ್ ಅಂದರೆ ಬ್ಯಾಟ್ಸ್‌ಮನ್‌ಗಳ ಅಬ್ಬರ.. ಬೌಲರ್‌ಗಳ ಸತ್ವ ಪರೀಕ್ಷೆ.. ಈ ಅಗ್ನಿ ಪರೀಕ್ಷೆಯಲ್ಲಿ ಆಲ್‌ರೌಂಡರ್ ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಟೀಮ್ ಇಂಡಿಯಾದಲ್ಲಿ ಈಗ ಟಿ20 ಕ್ರಿಕೆಟ್ ಆಡಬಲ್ಲ ಇಬ್ಬರು ಆಲ್‌ರೌಂಡರ್‌ಗಳು ಸದ್ಯ ತಂಡದಲ್ಲಿದ್ದಾರೆ. ಇದರಲ್ಲಿ ಒಬ್ಬರು ಗಾಯದಿಂದ ಹೊರಗೆ ಉಳಿದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಶ್ರಾಂತಿ ನೀಡಲಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಸ್ಟಾರ್ ಪ್ಲೇಯರ್ ಅಬ್ಬರಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ, ಆಲ್‌ರೌಂಡರ್ ಪ್ರದರ್ಶನ ನೀಡಿದ್ದಾರೆ. ಶಿವಂ ದುಬೆ ಅವರ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ನಿಂದಾಗಿ ಭಾರತವು ಗುರುವಾರ ನಡೆದ ಟಿ20 ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿತು.
ಗಾಯಗೊಂಡ ಹಾರ್ದಿಕ್ ಪಾಂಡ್ಯಗೆ ಬ್ಯಾಕಪ್ ಆಗಿ ಸೇರಿಕೊಂಡ ದುಬೆ, ನೇರ ಸಿಕ್ಸರ್ ಮತ್ತು ನಂತರ ಫೈನ್ ಲೆಗ್ ನಲ್ಲಿ ಫೋರ್ ಹೊಡೆಯುವ ಮೂಲಕ ಪಂದ್ಯವನ್ನು ಕೊನೆಗೊಳಿಸಿದರು. ಟೀಂ ಇಂಡಿಯಾ ಪರ ಹೀರೋ ಆಗಿದ್ದ ಶಿವಂ ದುಬೆ 40 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದರು. ಈ ವೇಳೆ ಅವರು ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
ಸಿಕ್ಕ ಅವಕಾಶವನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಂಡ 31ರ ಹರೆಯದ ಆಟಗಾರ ಆಲ್ ರೌಂಡ್ ಆಟ ಪ್ರದರ್ಶಿಸಿದರು. ಮೊದಲ ಬೌಲಿಂಗ್‌ನಲ್ಲಿ ಅವರು ಎರಡು ಓವರ್‌ಗಳಲ್ಲಿ ಒಂಬತ್ತು ರನ್‌ಗಳಿಗೆ ಒಂದು ವಿಕೆಟ್ ಪಡೆದರು. ನಂತರ ಗುರಿ ಬೆನ್ನಟ್ಟಿದ ಅವರು ಸ್ಟ್ರಾಂಗ್ ಸ್ಟ್ರೋಕ್ ಆಟದ ಕೌಶಲ್ಯವನ್ನು ಪ್ರದರ್ಶಿಸಿದರು.

ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಈ ಇನ್ನಿಂಗ್ಸ್‌ನಿಂದ ಟೆನ್ಷನ್‌ಗೆ ಒಳಗಾಗಿರಬೇಕು. ಶಿವಂ ಸರಣಿಯುದ್ದಕ್ಕೂ ಹೀಗೆಯೇ ಆಡಿ ಐಪಿಎಲ್‌ನಲ್ಲೂ ಮಿಂಚಿದರೆ ಟಿ20 ವಿಶ್ವಕಪ್ ತಂಡಕ್ಕೂ ಸೇರ್ಪಡೆಯಾಗಬಹುದು.
ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗಿ ಶಿವಂ ದುಬೆ ಅವರು 2019 ರಲ್ಲಿ ಭಾರತಕ್ಕಾಗಿ ಟಿ 20 ಮತ್ತು ನಂತರ ಏಕದಿನ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು. ಆದರೆ ಕಳಪೆ ಪ್ರದರ್ಶನದಿಂದಾಗಿ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡರು.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ ನಂತರ, ಅವರು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಾಗ ಅವರ ವೃತ್ತಿಜೀವನ ಮಹತ್ವದ ತಿರುವು ಪಡೆಯಿತು. 2022 ರ ಐಪಿಎಲ್ ಮೆಗಾ ಹರಾಜಿನಲ್ಲಿ ಧೋನಿ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಸ್‌ಕೆ ಅಲ್ಲಿ ಅವರು ಭರ್ಜರಿ ಪ್ರದರ್ಶನ ನೀಡಿದರು. ಮತ್ತು ಮೂರು ವರ್ಷಗಳ ನಂತರ ಅವರು 2023 ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗೆ ತಂಡದಲ್ಲಿ ಸ್ಥಾನ ಪಡೆದರು. ಸಿಕ್ಕ ಅವಕಾಶದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಶಿವಂ ಗಮನ ಸೆಳೆದರು. ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಅವರು ಭಾರತ ತಂಡಕ್ಕೆ ಆಯ್ಕೆ ಆದರು.