ಅಹಮದಾಬಾದ್: ಆಲ್‌ರೌಂಡರ್ ಶಿವಂ ದುಬೆ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ "ಎ" ಗುಂಪಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್‌ಗೆ 194 ರನ್‌ಗಳ ಗುರಿಯನ್ನು ನೀಡಿದೆ.
ನೆದರ್‌ಲ್ಯಾಂಡ್ಸ್ ತಂಡದ ವಿರುದ್ಧ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ಭಾರತ ಲೀಗ್ ಹಂತದ ಕೊನೆಯ ಪಂದ್ಯಕ್ಕಾಗಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿತು. ಕುಲ್‌ದೀಪ್ ಯಾದವ್ ಬದಲಿಗೆ ಅರ್ಶದೀಪ್ ಸಿಂಗ್ ಸ್ಥಾನ ಪಡೆದರೆ, ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಯಿತು. ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಅಭಿಷೇಕ್ ಶರ್ಮಾ ಅವರ ಮೇಲೆ ಒತ್ತಡ ಹೆಚ್ಚಿತ್ತು. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಅಭಿಷೇಕ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಪ್ರಸಕ್ತ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಅಭಿಷೇಕ್ ಶರ್ಮಾ ಇನ್ನೂ ಒಂದು ರನ್ ಬಾರಿಸಿಲ್ಲ.

ಮೊದಲ ಓವರ್‌ನಲ್ಲಿ ಕ್ರೀಸ್‌ಗೆ ತಿಲಕ್ ವರ್ಮಾ ಬಂದರು. ಇವರು ಆರಂಭಿಕ ಇಶಾನ್ ಕಿಶನ್ ಅವರೊಂದಿಗೆ ಎರಡನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಇಶಾನ್ ಕಿಶನ್ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 18 ರನ್ ಬಾರಿಸಿದ್ದಾಗ ಔಟ್ ಆದರು. ಮೂರನೇ ವಿಕೆಟ್‌ಗೆ ತಿಲಕ್ ವರ್ಮಾ ಅವರೊಂದಿಗೆ ಇನಿಂಗ್ಸ್ ಅರಂಭಿಸುವ ಹೊಣೆಯನ್ನು ಸೂರ್ಯಕುಮಾರ್ ಯಾದವ್ ಹೊತ್ತುಕೊಂಡರು. ಈ ವೇಳೆ ಸೂರ್ಯ ಅವರಿಗೆ ಒಂದು ಜೀವದಾನ ಸಹ ಸಿಕ್ಕಿತ್ತು. ಆದರೆ ತಿಲಕ್ ವರ್ಮಾ 31 ರನ್ ಬಾರಿಸಿದ್ದಾಗ ತಾಳ್ಮೆ ಕಳೆದುಕೊಂಡು ಬಿಗ್ ಹಿಟ್ ಬಾರಿಸಲು ಹೋಗಿ ರೋಲೋಫ್ ವ್ಯಾನ್ ಡೆರ್ ಮೆರ್ವೆ ಹಿಡಿದ ಕ್ಲಾಸಿಕ್ ಕ್ಯಾಚ್‌ಗೆ ಬಲಿಯಾದರು.
ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿ ಔಟ್ ಆದರು.
ಐದನೇ ವಿಕೆಟ್‌ಗೆ ಶಿವಂ ದುಬೆ ಅವರಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಅಬ್ಬರಿಸಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಜೋಡಿ ಬಳಿಕ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಿ ಮಿಂಚಿತು. ಈ ಜೋಡಿ 35 ಎಸೆತಗಳಲ್ಲಿ 76 ರನ್‌ಗಳ ಕಾಣಿಕೆ ನೀಡಿತು. ಆಲ್‌ರೌಂಡರ್ ಶಿವಂ ದುಬೆ 31 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ 66 ರನ್ ಬಾರಿಸಿದರು. ಈ ವೇಳೆ ಶಿವಂ ಅವರ ಸ್ಟ್ರೈಕ್ ರೇಟ್ 212 ರನ್ ಆಗಿತ್ತು.
ಹಾರ್ದಿಕ್ ಪಾಂಡ್ಯ ಸಹ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರು 21 ಎಸೆತಗಳಲ್ಲಿ 3 ಸಿಕ್ಸರ್ ಸಹಾಯದಿಂದ 30 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193 ರನ್ ಸೇರಿಸಿತು. ನೆದರ್‌ಲ್ಯಾಂಡ್ಸ್ ಪರ ಆರ್ಯನ್ ದತ್ 2, ಲೋಗನ್ ವ್ಯಾನ್ ಬೀಕ್ 3 ವಿಕೆಟ್ ಕಬಳಿಸಿದರು.