"ಭಾರತ ಟೆಸ್ಟ್ ತಂಡದ ಬಗ್ಗೆ ವಿರಾಟ್ ಕೊಹ್ಲಿ 2015ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಗಿದೆ"

ಬೆಂಗಳೂರು, ಆಗಸ್ಟ್ 29: ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ತನ್ನ ನೆಲದಲ್ಲಿ ಮಾತ್ರವಲ್ಲದೆ ವಿದೇಶಿ ನೆಲದಲ್ಲಿಯೂ ನೀಡಿಕೊಂಡು ಬರುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯುಂಟು ಮಾಡುವಂತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎಡವಿದ್ದು ಬಿಟ್ಟರೆ ತಂಡದ ಉಳಿದಂತೆ ಎಂತಾ ಸಂದರ್ಭದಲ್ಲಿಯೂ ತಿರುಗಿ ಬೀಳುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ ಬಂದಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಲಾರ್ಡ್ಸ್ ಟೆಸ್ಟ್.
ಲಾರ್ಡ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಭಾರತ ತಂಡ ಅಮೋಘ ರೀತಿಯಲ್ಲಿ ಗೆದ್ದುಕೊಂಡ ಬಳಿಕ ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ಮತ್ತೊಮ್ಮೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ದಿಗ್ಗಜ ವೇಗದ ಬೌಲರ್ ಅಲೆನ್ ಡೊನಾಲ್ಡ್ ಕೂಡ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು 2015ರಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಕೊಹ್ಲಿ ಆಡಿದ ಒಂದು ಮಾತನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಯೂಟ್ಯೂಬ್ ಚಾನೆಲ್‌ನ ಸಂವಾದವೊಂದರಲ್ಲಿ ಆಲನ್ ಡೊನಾಲ್ಡ್ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಅವರು 2015ರಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನ ಶ್ರೇಯಾಂಕದಲ್ಲಿ ಭಾರೀ ಕುಸಿತ ಕಂಡಿದ್ದಾಗ ಯಾವ ರೀತಿಯಲ್ಲಿ ತಂಡವನ್ನು ಮೇಲಕ್ಕೆತ್ತುವ ಬಗ್ಗೆ ಗುರಿಯನ್ನು ಹೊಂದಿದ್ದರು ಎಂಬುದನ್ನು ವಿವರಿಸಿದ್ದಾರೆ. ವಿದೇಶಿ ನೆಲದಲ್ಲಿ ತಂಡ ಸ್ಪರ್ಧಾತ್ಮಕವಾಗಿ ಹೇಗೆ ಆಡಬೇಕೆಂದು ಹಾಗೂ ಬೌಲಿಂಗ್‌ನಲ್ಲಿ ಕ್ರಾಂತಿಕಾರಕ ಸುಧಾರಣೆಯನ್ನು ಹೊಂದುವ ಗುರಿ ಹೊಂದಿದ್ದರು ಎಂಬುದನ್ನು ಅಲೆನ್ ಡೊನಾಲ್ಡ್ ಹೇಳಿದ್ದಾರೆ.
"ನನಗೆ 2015ರಲ್ಲಿ ವಿರಾಟ್ ಕೊಹ್ಲಿ ಆಡಿದ ಮಾತು ಸ್ಪಷ್ಟವಾಗಿ ನೆನಪಿದೆ. ಅಂದು ನನ್ನ ಬಳಿ ಆತ ಟೀಮ್ ಇಂಡಿಯಾವನ್ನು ನಂಬರ್ 1 ತಂಡವನ್ನಾಗಿ ಮಾಡಬೇಕು ಎಂಬ ಗುರಿಯನ್ನು ತನ್ನಲ್ಲಿ ಹೇಳಿಕೊಂಡಿದ್ದರು. ಮಾತನ್ನು ಆತ ನಿಜವಾಗಿಸಿದ್ದಾರೆ. ಆತನಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆಯಿದೆ. ಆತ ಅಂದು ನನ್ನಲ್ಲಿ 'ನಾನು ಈ ತಂಡವನ್ನು ಅತ್ಯಂತ ಸಮರ್ಥವಾದ ತಂಡವನ್ನಾಗಿ ಮಾಡಬೇಕು. ನಾನು ಈ ತಂಡವನ್ನು ವಿಶ್ವದಲ್ಲಿಯೇ ಶ್ರೇಷ್ಠವಾದ ತಂಡವನ್ನಾಗಿ ಮಾಡಬೇಕು. ತವರಿಗಿಂತ ಆಚೆಯೂ ನಾವು ಬಲಿಷ್ಠವಾಗಬೇಕು. ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದುವ ಮೂಲಕ ನಾವು ಯಾವುದೇ ತಂಡವನ್ನಾದರೂ ಸೋಲಿಸಬಲ್ಲೆವು ಎಂದು ತಿಳಿದುಕೊಳ್ಳಬೇಕಿದೆ' ಎಂದು ವಿರಾಟ್ ಕೊಹ್ಲಿ ಹೇಳಿದ್ದರು" ಎಂದು ಅಲೆನ್ ಡೊನಾಲ್ಡ್ ತಿಳಿಸಿದ್ದಾರೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅಲೆನ್ ಡೊನಾಲ್ಡ್ ಈ ಮಾತನ್ನು ಹೇಳಿದ್ದಾರೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಬಳಗ 151 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕೊಹ್ಲಿ ಕನಸು ನನಸಾಗಿದೆ ಎಂದು ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ. ಅಲೆನ್ ಡೊನಾಲ್ಡ್ ಹೇಳಿದ ಮಾತಿನ ಪ್ರಕಾರ ವಿರಾಟ್ ಅಂದು ಆಡಿದಂತೆಯೇ ಲಾರ್ಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ನಾಲ್ವರು ವೇಗಿಗಳೊಂದಿಗೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಕಣಕ್ಕಿಳಿದು ಒಟ್ಟು 20 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿತ್ತು.
ಬೂಮ್ರಾ ಬಗ್ಗೆ ಮೆಚ್ಚುಗೆಯ ಮಾತನಾಡಿದ ದಿಗ್ಗಜ: ಇನ್ನು ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಪ್ರದರ್ಶನದ ಬಗ್ಗೆಯೂ ಮಾತನಾಡಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಬೂಮ್ರಾ ಮೂರು ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಅವರು 22 ಟೆಸ್ಟ್ ಪಂದ್ಯಗಳಲ್ಲಿ 95 ವಿಕೆಟ್‌ಗಳನ್ನು ಕಬಳಿಸಿದ್ದಾರೆ. "ಯುವ ಬೌಲರ್ ಬೂಮ್ರಾ ಅದ್ಭುತ ಬೌಲಿಂಗ್ ನಡೆಸಿದ್ದಾರೆ. ಆತ ಇನ್ನು ಕೂಡ ಸಾಕಷ್ಟು ದೂರ ಸಾಗಬೇಕಿದೆ. ಆತ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಡೊನಾಲ್ಡ್ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications