ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಈಗಾಗಲೇ ಭಾರತೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಇದೀಗ ಅವರ ಚಿತ್ತ ವಿದೇಶಿ ಲೀಗ್ ಕ್ರಿಕೆಟ್‌ನ ಮೇಲೆ ನೆಟ್ಟಿದ್ದು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಮುಂಬರುವ ಸಿಪಿಎಲ್ ಆವೃತ್ತಿಯಲ್ಲಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದೆ.
ಸಿಪಿಎಲ್ ಎಂದೇ ಖ್ಯಾತವಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಸದ್ಯ ಜಗತ್ತಿನ ಪ್ರಖ್ಯಾನ ಲೀಗ್ ಕ್ರಿಕೆಟ್‌ಗಳಲ್ಲಿ ಒಂದು. ಕೋಟ್ಯಂತರ ಅಭಿಮಾನಿಗಳನ್ನು ಕೂಡ ಈ ಲೀಗ್ ಹೊಂದಿದೆ. ಇದೀಗ ಅಂಬಾಟಿ ರಾಯುಡು ಕೂಡ ಈ ಲೀಗ್‌ನಲ್ಲಿ ಆಡಲು ಸಜ್ಜಾಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಕೇವಲ ಎರಡನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ ರಾಯುಡು. ಇದಕ್ಕೂ ಮುನ್ನ ಹಿರಿಯ ಕ್ರಿಕೆಟಿಗ ಪ್ರವೀಣ್ ತಾಂಬೆ ಈ ಲೀಗ್‌ನಲ್ಲಿ ಆಡಿದ್ದರು.

ಮುಂದಿನ ಕೆರಿಬಿಯನ್ ಲೀಗ್ ಟೂರ್ನಿಯಲ್ಲಿ ಸೈಂಟ್ ಕಿಟ್ಸ್ ಆಂಡ್ ವೆವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ಮಾರ್ಕ್ಯೂ ಆಟಗಾರನಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಹಿರಿಯ ಕ್ರಿಕೆಟಿಗ. ಇನ್ನು ಇದಕ್ಕೂ ಮುನ್ನ ಅಂಬಾಟಿ ರಾಯುಡು ಹೊಸದಾಗಿ ಆರಂಭವಾಗಿರುವ ಯುನೈಟೆಡ್ ಸ್ಟೇಟ್ಸ್‌ನ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ(ಎಂಎಲ್‌ಸಿ) ಚೆನ್ನೈ ಸೂಪರ್ ಕಿಂಗ್ಸ್‌ನ ಸೋದರಿ ಫ್ರಾಂಚೈಸಿಯಾಗಿರುವ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯ ಲೀಗ್‌ನಲ್ಲಿ ರಾಯುಡು ಆಡಿರಲಿಲ್ಲ.
ಇನ್ನು ಅಂಬಾಟಿ ರಾಯುಡು ಅವರ ನಿವೃತ್ತಿ ಕುಡ ಸಾಕಷ್ಟು ಚರ್ಚೆಯ ವಿಷಯವಾಗಿತ್ತು. 2023ರ ಐಪಿಎಲ್‌ನ ಫೈನಲ್ ತನ್ನ ಕೊನೆಯ ಐಪಿಎಲ್ ಪಂದ್ಯ ಎಂದು ಮೊದಲೇ ಘೋಷಣೆ ಮಾಡಿದ್ದ ಅಂಬಾಟಿ ರಾಯುಡು ಈ ಬಾರಿ ತಾನು ನಿವೃತ್ತಿಯಿಂದ ಹೊರಬರುವ ನಿರ್ಧಾರವನ್ನು ಮಾಡುವುದಿಲ್ಲ ಎಂದು ಕೂಡ ಪ್ರಕಟಿಸಿದ್ದರು.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಎನಿಸಿಕೊಳ್ಳುವ ಮೂಲಕ ಅದ್ಭುತವಾದ ಆವೃತ್ತಿಯೊಂದಿಗೆ ರಾಯುಡು ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೂ ನಿವೃತ್ತಿ ಹೇಳಿದಂತಾಗಿದೆ. ಹೀಗಾಗಿ ಅಂಬಾಟಿ ರಾಯುಡು ಈಗ ವಿದೇಶಿ ಲೀಗ್‌ಗಳಲ್ಲಿ ಆಡಲು ಅರ್ಹರಾಗಿದ್ದಾರೆ.
"ಸೈಂಟ್ ಕಿಟ್ & ನೇವೀಸ್ ಪೇಟ್ರಿಯಾಟ್ಸ್"ಗೆ ಸೇರಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಮುಂಬರುವ ಸಿಪಿಎಲ್‌ನಲ್ಲಿ ತಂಡಕ್ಕೆ ಸಕಾರಾತ್ಮಕ ಕೊಡುಗೆಯನ್ನು ನೀಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಎಂದು ಇಎಸ್‌ಪಿಎನ್‌ಗೆ ರಾಯುಡು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.