ಕೊಹ್ಲಿ ನಾಯಕತ್ವ ವಿವಾದ: ಬಿಸಿಸಿಐ ನನ್ನನ್ನೂ ಇದೇ ರೀತಿ ನಡೆಸಿಕೊಂಡಿತ್ತು ಎಂದ ಮಾಜಿ ಕ್ರಿಕೆಟಿಗ!

ಈ ವರ್ಷದ ಆರಂಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ಇದೀಗ ಸದ್ಯಕ್ಕೆ ಕೇವಲ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದಾರೆ. ಹೌದು, ಟಿ ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಹೀಗೆ ಎಲ್ಲಾ ಮಾದರಿಯ ತಂಡಗಳಿಗೂ ನಾಯಕನಾಗಿದ್ದ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಕೈಗೊಂಡಿದ್ದರು. ಅದರಂತೆಯೇ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು ಮತ್ತು ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಯಾದರು.
ಹೀಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಕೈಗೊಂಡಿದ್ದ ವಿರಾಟ್ ಕೊಹ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ ಎಂದು ಕಾರಣವನ್ನು ಕೂಡ ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ನೀಡಿದ್ದ ಈ ಭರವಸೆ ಹೆಚ್ಚು ದಿನ ಉಳಿಯಲಿಲ್ಲ ಏಕೆಂದರೆ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸಿದ ಬೆನ್ನಲ್ಲೇ ಬಿಸಿಸಿಐ ವಿರಾಟ್ ಕೊಹ್ಲಿಯಿಂದ ಭಾರತ ಏಕದಿನ ತಂಡದ ನಾಯಕತ್ವವನ್ನು ಕಸಿದುಕೊಂಡಿತು. ಹೌದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದಾಗ ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನೂತನ ನಾಯಕನಾಗಲಿದ್ದಾರೆ ಎಂದು ಬಿಸಿಸಿಐ ಘೋಷಿಸಿತು.
ಈ ವಿದ್ಯಮಾನಗಳು ಜರುಗಿದ ಬೆನ್ನಲ್ಲೇ ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅನುಮಾನ ಮೂಡುವಂಥ ಘಟನೆಗಳು ನಡೆದವು. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದೆಲ್ಲಾ ಊಹಾಪೋಹಗಳು ಹಬ್ಬಿದ್ದವು. ಹೀಗೆ ವಿರಾಟ್ ಕೊಹ್ಲಿ ಕುರಿತಾಗಿ ಹಲವಾರು ಸುದ್ದಿಗಳು ಹಬ್ಬಲು ಆರಂಭಿಸುತ್ತಿದ್ದಂತೆ ಎಚ್ಚೆತ್ತ ಕೊಹ್ಲಿ ಇಂದು ಮಾಧ್ಯಮಗೋಷ್ಠಿಯನ್ನು ನಡೆಸಿ ಆ ಎಲ್ಲಾ ಊಹಾಪೋಹಗಳು ಸುಳ್ಳು ಎಂದು ಬಹಿರಂಗಪಡಿಸಿದರು. ಹಾಗೂ ಡಿಸೆಂಬರ್ 8ರಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ 90 ನಿಮಿಷಗಳಿಗೂ ಮುನ್ನ ಕರೆ ಮಾಡಿದ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ತನ್ನನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿರುವುದಾಗಿ ತಿಳಿಸಿದರು ಮತ್ತು ಇದಕ್ಕೆ ನಾನು ಸಮ್ಮತಿಯನ್ನು ಕೂಡ ಸೂಚಿಸಿದೆ ಎಂದು ಸ್ಪಷ್ಟನೆಯನ್ನೂ ನೀಡಿದರು. ಹೀಗೆ ಮಾಧ್ಯಮಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಈ ಹಿಂದೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ನೇರವಾದ ಉತ್ತರಗಳನ್ನು ನೀಡುವುದರ ಮೂಲಕ ತೆರೆ ಎಳೆದ ಬೆನ್ನಲ್ಲೇ ಇದೀಗ ಕೊಹ್ಲಿ ಮಾತುಗಳ ಕುರಿತಾಗಿ ಹಲವಾರು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿ ಬಿಸಿಸಿಐ ವಿರುದ್ಧ ಚಾಟಿ ಬೀಸಿದ್ದಾರೆ.

ಬಿಸಿಸಿಐ ನಡೆ ಕುರಿತು ಕಿಡಿಕಾರಿದ ಅಮಿತ್ ಮಿಶ್ರಾ
ವಿರಾಟ್ ಕೊಹ್ಲಿ ಹೇಳಿಕೆಗಳ ನಂತರ ಪ್ರತಿಕ್ರಿಯಿಸಿರುವ ಅಮಿತ್ ಮಿಶ್ರಾ ಆಟಗಾರರಿಗೆ ಮಾಹಿತಿ ನೀಡಬೇಕಾದದ್ದು ಬಿಸಿಸಿಐನ ಕರ್ತವ್ಯ ಮತ್ತು ಆ ಮಾಹಿತಿಯನ್ನು ಪಡೆದುಕೊಳ್ಳುವುದು ಆ ಆಟಗಾರನ ಹಕ್ಕು ಎಂದಿದ್ದಾರೆ. ಯಾವುದೇ ಆಟಗಾರನನ್ನಾಗಲಿ ಅಥವಾ ನಾಯಕನನ್ನಾಗಲಿ ತಂಡದಿಂದ ಅಥವಾ ನಾಯಕನ ಸ್ಥಾನದಿಂದ ಬಿಸಿಸಿಐ ತೆಗೆದುಹಾಕಲು ತೀರ್ಮಾನಿಸಿದರೆ ಆ ಆಟಗಾರನಿಗೆ ಕೆಲ ದಿನಗಳ ಮುಂಚೆಯೇ ಮಾಹಿತಿಯನ್ನು ನೀಡಬೇಕು, ಅದನ್ನು ಬಿಟ್ಟು ಕೆಲ ನಿಮಿಷಗಳು ಬಾಕಿ ಇರುವಾಗ ಬಿಸಿಸಿಐ ಆ ಆಟಗಾರನಿಗೆ ತಮ್ಮ ನಿರ್ಧಾರವನ್ನು ತಿಳಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಹಾಗೂ ಇನ್ನೂ ಮುಂದುವರೆದು ಮಾತನಾಡಿರುವ ಅಮಿತ್ ಮಿಶ್ರಾ ಬಿಸಿಸಿಐ ಮುಂಚಿತವಾಗಿ ಆ ಆಟಗಾರನಿಗೆ ವಿಷಯವನ್ನು ತಿಳಿಸಿದರೆ ತಾನು ಎಲ್ಲಿ ತಪ್ಪು ಮಾಡಿದ್ದಾನೆ ಮತ್ತು ಸರಿಪಡಿಸಿಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಂಡು ಸರಿ ಹಾದಿಗೆ ಬರಲಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಈ ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ ಎಂದ ಅಮಿತ್ ಮಿಶ್ರಾ!
ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕುತ್ತಿರುವ ವಿಷಯವನ್ನು ವಿರಾಟ್ ಕೊಹ್ಲಿಗೆ ಅಂತಿಮ ಕ್ಷಣದಲ್ಲಿ ಬಿಸಿಸಿಐ ತಿಳಿದಿತ್ತು ಎಂಬ ವಿಷಯದ ಕುರಿತಾಗಿ ಕೆಂಡ ಕಾರಿರುವ ಅಮಿತ್ ಮಿಶ್ರಾ ಬಿಸಿಸಿಐ ಆಟಗಾರರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಬಿಸಿಸಿಐ ಆಟಗಾರರನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಾದ ಮಾಹಿತಿ ನೀಡದೆ ತಂಡದಿಂದ ಕೈಬಿಟ್ಟಿದೆ ಎಂಬ ಆರೋಪವನ್ನು ಅಮಿತ್ ಮಿಶ್ರಾ ಮಾಡಿದ್ದಾರೆ. ಈ ಮೂಲಕ ಬಿಸಿಸಿಐ ತನ್ನನ್ನು ಕೂಡ ಸರಿಯಾದ ಮಾಹಿತಿ ನೀಡದೇ ತಂಡದಿಂದ ತೆಗೆದು ಹಾಕಿತ್ತು ಎಂಬ ಆಕ್ರೋಶವನ್ನು ಪರೋಕ್ಷವಾಗಿ ಅಮಿತ್ ಮಿಶ್ರಾ ಇಲ್ಲಿ ವ್ಯಕ್ತಪಡಿಸಿದರು.

ದೇಶದ ಪರ ಆಡುವ ಆಟಗಾರರಿಗೆ ತಕ್ಕ ಮರ್ಯಾದೆ ಸಿಗುತ್ತಿಲ್ಲ!
ಬಿಸಿಸಿಐ ಆಟಗಾರರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಮತ್ತು ತೆಗೆದುಕೊಳ್ಳುವ ನಿರ್ಧಾರವನ್ನು ಬೇಗನೆ ತಿಳಿಸುವುದಿಲ್ಲ ಎಂಬುದರ ಕುರಿತು ಕಿಡಿಕಾರಿರುವ ಅಮಿತ್ ಮಿಶ್ರಾ ದೇಶಕ್ಕಾಗಿ ಆಡುವ ಆಟಗಾರರಿಗೆ ತಕ್ಕನಾದ ಮರ್ಯಾದೆಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಆಟಗಾರರು ಕಷ್ಟಪಟ್ಟು ದೇಶಕ್ಕಾಗಿ ಆಡುತ್ತಾರೆ ಆದರೆ ದೇಶಕ್ಕಾಗಿ ಆಡುವ ಆಟಗಾರರಿಗೆ ಬಿಸಿಸಿಐ ನೀಡಬೇಕಾದ ಮರ್ಯಾದೆಯನ್ನು ನೀಡುವುದಿಲ್ಲ ಎಂದು ಅಮಿತ್ ಮಿಶ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications