ಭಾರತ ದೇಶೀಯ ಕ್ರಿಕೆಟ್‌ನ ಪ್ರವರ್ತಕ ಎನಿಸಿಕೊಂಡಿರುವ ಅಮೋಲ್ ಮುಜುಂದಾರ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬುಧವಾರ ಅಕ್ಟೋಬರ್ 25ರಂದು ನೇಮಕಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯದ ಅಮೋಲ್ ಮುಜುಂದಾರ್ ಅವರು 171 ಪಂದ್ಯಗಳಲ್ಲಿ 30 ಶತಕಗಳು ಸೇರಿದಂತೆ 11,000 ಪ್ರಥಮ ದರ್ಜೆ ರನ್ ಗಳಿಸಿದ್ದಾರೆ.

ಅವರ ಪ್ರಭಾವಶಾಲಿ ದಾಖಲೆಯ ಹೊರತಾಗಿಯೂ, ಅಮೋಲ್ ಮುಜುಂದಾರ್ ಎಂದಿಗೂ ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಡಲು ಆಯ್ಕೆಯಾಗಲಿಲ್ಲ. ಏಕೆಂದರೆ ಅವರ ಆಟದ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಂತಹ ಕ್ರಿಕೆಟ್ ಲೆಜೆಂಡ್‌ಗಳು ಭಾರತ ತಂಡದಲ್ಲಿ ಗಟ್ಟಿ ಸ್ಥಾನ ಹೊಂದಿದ್ದರು.
ಅಮೋಲ್ ಮುಜುಂದಾರ್ ಅವರ ಕೋಚಿಂಗ್ ವೃತ್ತಿಯು ಅಷ್ಟೇ ಗಮನಾರ್ಹವಾಗಿದೆ. ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು ಮತ್ತು ಭಾರತ ಪ್ರವಾಸದ ಸಮಯದಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮಧ್ಯಂತರ ಬ್ಯಾಟಿಂಗ್ ಕೋಚ್ ಪಾತ್ರವನ್ನು ವಹಿಸಿಕೊಂಡರು.
ಭಾರತದ ಹಿರಿಯ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಮೊದಲು, ಅಮೋಲ್ ಮುಜುಂದಾರ್ ಮುಂಬೈ ರಣಜಿ ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು.

ಅಮೋಲ್ ಮುಜುಂದಾರ್ ತಮ್ಮ ಸುಪ್ರಸಿದ್ಧ 21 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 100 ಲಿಸ್ಟ್ ಎ ಆಟಗಳಲ್ಲಿ ಮತ್ತು 14 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮುಂಬೈ ತಂಡದೊಂದಿಗೆ ಹಲವು ರಣಜಿ ಟ್ರೋಫಿ ಪ್ರಶಸ್ತಿ ಗೆದ್ದರು ಮತ್ತು ನಂತರ ಅಸ್ಸಾಂ ಮತ್ತು ಆಂಧ್ರಪ್ರದೇಶ ತಂಡವನ್ನು ಪ್ರತಿನಿಧಿಸಿದರು.
ಅಮೋಲ್ ಮುಜುಂದಾರ್ ಅವರ ಕೋಚಿಂಗ್ ಅನುಭವವು ಭಾರತದ ಅಂಡರ್-19 ಮತ್ತು ಅಂಡರ್-23 ಕ್ರಿಕೆಟ್ ತಂಡಗಳಿಗೂ ವಿಸ್ತರಿಸಿದೆ. ಅಲ್ಲದೆ, ಅಮೋಲ್ ಮುಜುಂದಾರ್ ಅವರು ನೆದರ್ಲ್ಯಾಂಡ್ಸ್ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶಿಸಿತು. ಸಂಪೂರ್ಣ ಮತ್ತು ಚಿಂತನಶೀಲ ಚರ್ಚೆಯ ನಂತರ, ಮೂವರು ಸದಸ್ಯರ ಸಮಿತಿಯು ಸರ್ವಾನುಮತದಿಂದ ಅಮೋಲ್ ಮುಜುಂದಾರ್ ಅವರನ್ನು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಶಿಫಾರಸ್ಸು ಮಾಡಿದೆ.