ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಕೆಕೆಆರ್ ತಂಡಕ್ಕೆ ಕೂಡ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಪ್ರಮುಖ ಆಲ್‌ರೌಂಡರ್ ಆಂಡ್ರೆ ರಸೆಲ್ ಆಡುವುದು ಅನುಮಾನ ಎನ್ನಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ರಸೆಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು.
ಆಂಡ್ರೆ ರಸೆಲ್ ಕೆಕೆಆರ್ ತಂಡದ ಪ್ರಮುಖ ಆಟಗಾರ, ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಆದರೆ, ಈ ಆವೃತ್ತಿಯಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 2.1 ಓವರ್ ಬೌಲಿಂಗ್ ಮಾಡಿದ ಅವರು ಮೂರು ವಿಕೆಟ್ ಪಡೆದುಕೊಂಡಿದ್ದರು. ಆದರೆ ಬೌಲಿಂಗ್ ಮಾಡುವ ಸಂದರ್ಭದಲ್ಲೇ ಗಾಯಗೊಂಡು ಹೊರನಡೆದ ಪರಿಣಾಮ ಶಾರ್ದುಲ್ ಠಾಕೂರ್ ಅವರ ಓವರ್ ಪೂರ್ಣಗೊಳಿಸಿದ್ದರು.

ನಂತರ ಬ್ಯಾಟಿಂಗ್ ಮಾಡಲು ಬಂದರೂ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ, 6 ಎಸೆತಗಳನ್ನು ಎದುರಿಸಿದ ಅವರು ಕೇವಲ 3 ರನ್ ಗಳಿಸಿ ಔಟಾದರು. ರಸೆಲ್ ಹಲವು ತಿಂಗಳುಗಳಿಂದ ಫಿಟ್‌ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಪೂರ್ಣವಾಗಿ 4 ಓವರ್ ಗಳನ್ನು ಬೌಲಿಂಗ್ ಮಾಡಿಲ್ಲ, ಈ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ, ಸನ್‌ರೈಸರ್ಸ್ ವಿರುದ್ಧ ಮಾತ್ರ ಬೌಲಿಂಗ್ ಮಾಡಿದರು, ಮೂರು ವಿಕೆಟ್ ಪಡೆದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಕೆಕೆಆರ್ ತನ್ನ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 16 ರಂದು ಭಾನುವಾರ ಮಧ್ಯಾಹ್ನ 3.30ಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ರಸೆಲ್ ಆಡುವುದು ಅನುಮಾನ ಎನ್ನಲಾಗಿದೆ.
ಅವರ ಫಿಟ್‌ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರು ಆಡದೇ ಇರುವುದು ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದರೂ ಕೆಕೆಆರ್ ಮುಂದೆ ಹಲವು ಆಯ್ಕೆಗಳಿರುವುದಿರಂದ ಅವರು ಹೆಚ್ಚಿನದಾಗಿ ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ರಸೆಲ್ ಬದಲಾಗಿ ಇಂಗ್ಲೆಂಡ್‌ನ ಬ್ಯಾಟರ್ ಜೇಸನ್ ರಾಯ್ ಆಡುವ ಸಾಧ್ಯತೆ ಇದೆ. ಲಿಟ್ಟನ್ ದಾಸ್, ಟಿಮ್ ಸೌಥಿ ಅಂತಹ ಆಟಗಾರರ ಆಯ್ಕೆ ಇದ್ದರೂ, ವಾಂಖೆಡೆಯ ಬ್ಯಾಟಿಂಗ್ ಪಿಚ್ ಅನ್ನು ಗಮನದಲ್ಲಿಟ್ಟುಕೊಂಡು ಜೇಸನ್ ರಾಯ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು.
ರಹಮನುಲ್ಲಾ ಗುರ್ಬಾಜ್ ಬದಲಾಗಿ ಬಾಂಗ್ಲಾದೇಶದ ಸ್ಫೋಟಕ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಕೂಡ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಕೆಕೆಆರ್ ಬೌಲಿಂಗ್ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ ಟಿಮ್ ಸೌಥಿ ಕೂಡ ತಂಡಕ್ಕೆ ಮರಳಬಹುದು.
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಎನ್ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಸುಯಶ್ ಶರ್ಮಾ, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಡೇವಿಡ್ ವೀಸ್, ಮಂದೀಪ್ ಸಿಂಗ್, ಟಿಮ್ ಸೌಥಿ, ಜೇಸನ್ ರಾಯ್, ಲಿಟ್ಟನ್ ದಾಸ್, ಕುಲ್ವಂತ್ ಖೆಜ್ರೋಲಿಯಾ, ಹರ್ಷಿತ್ ರಾಣಾ.