
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್, ಅಫ್ಘಾನಿಸ್ತಾನ ಆಲ್ ರೌಂಡರ್ ರಶೀದ್ ಖಾನ್‌ಗೆ ತರಲೆ ಮಾಡಿದ ದೃಶ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ ವೇಳೆ ಕಂಡುಬಂದಿದೆ. ಬಾರ್ಬಡೋಸ್ ಟ್ರೈಡೆಂಟ್ಸ್ ಮತ್ತು ಜಮೈಕಾ ತಲೈವಾಸ್ ಪಂದ್ಯದ ವೇಳೆ ಈ ದೃಶ್ಯ ಕಾಣಸಿಕ್ಕಿದೆ.
ವೆಸ್ಟ್ ಇಂಡೀಸ್ ಆಟಗಾರರು ತರಲೆ-ತಮಾಷೆಗೆ ಆಗೀಗ ಗಮನ ಸೆಳೆಯುತ್ತಿರುವುದನ್ನು ನಾವು ನೋಡುತ್ತಿರುತ್ತೇನೆ. ಈ ಬಾರಿ ಜಮೈಕಾ ತಲೈವಾಸ್ ಪ್ರತಿನಿಧಿಸಿದ್ದ ಆ್ಯಂಡ್ರೆ ರಸೆಲ್ ಎದುರಾಳಿ ಟ್ರೈಡೆಂಟ್ಸ್ ಆಟಗಾರ ರಶೀದ್ ಖಾನ್ ಅವರನ್ನು ತಮಾಷೆಯಾಗಿ ಕೆಣಕಿದರು.
ಸೆಪ್ಟೆಂಬರ್ 5ರಂದು ನಡೆದ ಪಂದ್ಯದ ವೇಳೆ 17ನೇ ಓವರ್‌ನಲ್ಲಿ ರಶೀದ್ ಎಸೆದ ಗೂಗ್ಲಿ ಎಸೆತಕ್ಕೆ ರಸೆಲ್ ದೊಡ್ಡ ಹೊಡೆತ ಕೊಡಲು ಮುಂದಾದರು. ಆದರೆ ಚೆಂಡು ಬ್ಯಾಟಿಗೆ ಸಿಗಲಿಲ್ಲ. ರಸೆಲ್ ದಾಟಿ ಹೋದ ಚೆಂಡು ಕೀಪರ್ ಕೈ ಸೇರಿತು. ಚೆಂಡು ಸ್ಟಂಪ್ಸ್ ದಾಟಿ ಹೋಗುವಾಗ ಬೇಲ್ಸ್‌ಗೆ ತಾಗಿತು. ಆದರೆ ಬೇಲ್ಸ್ ಕೆಳಗುರುಳದಿದ್ದರಿಂದ ರಸೆಲ್ ಔಟಾಗಲಿಲ್ಲ.
ರಸೆಲ್ ಔಟಾಗುತ್ತಾರೆಂದು ರಶೀದ್ ಎದುರು ನೋಡುತ್ತಿದ್ದರಾದರೂ ಅದೃಷ್ಟವಶಾತ್ ರಸೆಲ್ ಬದುಕುಳಿದರು. ಈ ವೇಳೆ ರಸೆಲ್ ಅವರು ಖಾನ್‌ಗೆ ಅಣಕಿಸಿದರು. ಮರುಕ್ಷಣ ಇಬ್ಬರೂ ಕೈ ತಾಗಿಸಿ ಸ್ನೇಹ ವಿನಿಮಯ ಮಾಡಿಕೊಂಡರು. ರಸೆಲ್ ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 54 ರನ್ ಬಾರಿಸಿದರು. ಆದರೆ ಪಂದ್ಯದಲ್ಲಿ ಟ್ರೈಡೆಂಟ್ 7 ವಿಕೆಟ್ ಜಯ ಗಳಿಸಿತು.