ಒಂದೆಡೆ ವೆಸ್ಟ್ ಇಂಡೀಸ್ ತಂಡ ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಮತ್ತೊಂದೆಡೆ ತವರಿನಲ್ಲಿಯೇ ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರೀ ಅಂತರದ ಸೋಲು ಅನುಭವಿಸಿ ತನ್ನ ಭವ್ಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸಂಕಷ್ಟದ ಸಮಯಗಳನ್ನು ಎಣಿಸುತ್ತಿದೆ. ಇಂಥಾ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಪುನಶ್ಚೇತನದ ಬಗ್ಗೆ ಚರ್ಚೆಗಳ ನಡೆಯುತ್ತಿದೆ.
ಇಂಥಾ ಸಂಕಷ್ಟದ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಹಿರಿಯ ಆಟಗಾರ ಆಲ್‌ರೌಂಡರ್ ಆಂಡ್ರೆ ರಸೆಲ್ ರಾಷ್ಟ್ರೀತ ತಂಡದಲ್ಲಿ ಆಡುವ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಾನು ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡಲು ಬಯಸುವುದಾಗಿ ಹೇಳಿರುವ ಆಂಡ್ರೆ ರಸೆಲ್ ಅದಕ್ಕಾಗಿ ಒಂದೆರಡು ಲೀಗ್ ಕ್ರಿಕೆಟ್‌ಗಳನ್ನು ಬಿಟ್ಟುಕೊಡಲು ಕೂಡ ತಾನು ಸಿದ್ಧ ಎಂದಿದ್ದಾರೆ.

ಆಂಡ್ರೆ ರಸೆಲ್ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಡಿ ಖ್ಯಾತರಾಗಿದ್ದಾರೆ. ಐಪಿಎಲ್‌ನಲ್ಲಿಯೂ ಕೆಕೆಆರ್ ಪರವಾಗಿ ಆಡಿ ಅನೇಕ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೂ ಕಳೆದ ವರ್ಷ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಭಾಗಿಯಾಗಿದ್ದಾಗ ಆ ತಂಡಕ್ಕೆ ಈ ದಿಗ್ಗಜ ಆಲ್‌ರೌಂಡರ್‌ನನ್ನು ಪರಿಗಣಿಸಿರಲಿಲ್ಲ. ಆದರೆ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ವಿಂಡೀಸ್ ತಂಡ ಮುಖ್ಯ ಸುತ್ತಿಗೆ ಪ್ರವೇಶ ಪಡೆಯದೆ ಟೂರ್ನಿಯಿಂದ ಹೊರಬಿದ್ದಿತ್ತು.
ಆಂಡ್ರೆ ರಸೆಲ್ ವೆಸ್ಟ್ ಇಂಡೀಸ್ ಪರವಾಗಿ 2021ರಲ್ಲಿ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಐದು ಪಂದ್ಯಗಳ ಟಿ2o0 ಸರಣಿಯಲ್ಲಿ ಆಡಲಿದ್ದು ಈ ಸರಣಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
"ನಾನು ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡಲು ಲಭ್ಯವಿದ್ದೇನೆ. ನಾನು ಮುಂದಿನ ವಿಶ್ವಕಪ್‌ನ ಭಾಗವಾಗಲು ಬಯಸುತ್ತೇನೆ. ಹಾಗಾಗಿ ಅವರು ನನ್ನನ್ನು ತಂಡಕ್ಕೆ ಸೇರಿಸಿದರೆ ಅದು ನನಗೆ ವಿಶೇಷವಾದದ್ದು" ಎಂದು ಅಂಡ್ರೆ ರಸೆಲ್ ಜಮೈಕಾ ಅಬ್ಸರ್ವರ್‌ಗೆ ತಿಳಿಸಿದ್ದಾರೆ. "ನಾನು ವಿಶ್ವಕಪ್‌ಗೆ ಆಯ್ಕೆಯಾಗಲು ಒಂದೆರಡು ಸರಣಿಗಳನ್ನು ಆಡಲು ಸಿದ್ಧನಿದ್ದೇನೆ. ನಾನು ಏನೂ ಇಲ್ಲದೇ ವಿಶ್ವಕಪ್‌ನಲ್ಲಿ ಆಡಲು ಬಯಸುತ್ತೇನೆ ಎಂದು ಹೇಳುತ್ತಿಲ್ಲ" ಎಂದಿದ್ದಾರೆ ವೆಸ್ಟ್ ಇಂಡೀಸ್‌ನ ಹಿರಿಯ ಆಟಗಾರ.
"ಎಲ್ಲ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ನನಗೆ ತಿಳಿಯುತ್ತಿದೆ. ವೆಸ್ಟ್ ಇಂಡೀಸ್ ಪರವಾಗಿ ಆಡಬೇಕಾದರೆ ಒಂದೆರಡು ಲೀಗ್‌ಗಳನ್ನು ಕೂಡ ಬಿಟ್ಟುಬಿಡಬೇಕಾಗುತ್ತದೆ ಎಂದು ನನಗೆ ಗೊತ್ತಿದೆ. ನಾನು ಅದನ್ನು ಖುಷಿಯಿದ ಮಾಡುತ್ತೇನೆ ಮತ್ತು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಾತರಿಸುತ್ತಿದ್ದೇನೆ. ಯಾವುದೇ ವಿಭಾಗದಲ್ಲಿ ಬೇಕಾದರು ನಾನು ಆಡಲು ಸಿದ್ಧನಿದ್ದೇನೆ" ಎಂದಿದ್ದಾರೆ ಆಂಡ್ರೆ ರಸೆಲ್.