ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್ ಆರಂಭಕ್ಕೂ ಮುನ್ನ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಐಪಿಎಲ್ ಅಭಿಮಾನಿಗಳ ತಮ್ಮ ತಂಡದ ಆಟಗಾರರ ಮೇಲೆ ಒಂದು ಕಣ್ಣು ನೆಟ್ಟಿರುತ್ತಾರೆ. ಅಂತೆಯೇ ಐಪಿಎಲ್‌ನಲ್ಲಿ ಮಿಂಚಲು ರೆಡಿಯಾಗಿರುವ ಪ್ರತಿಭೆ ರಣಜಿ ಟ್ರೋಫಿಯಲ್ಲಿ ಆಡಿದ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಾಗಿದ್ದರೆ ಆ ಯುವ ಆಟಗಾರ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ತಮಿಳುನಾಡು ಹಾಗೂ ಚಂಡೀಗಢ್ ನಡುವಿನ ರಣಜಿ ಟ್ರೋಫಿ ಡಿ ಗುಂಪಿನ ಪಂದ್ಯ ಸೇಲಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ತಮಿಳು ನಾಡು ಮೊದಲು ಬ್ಯಾಟಿಂಗ್ ಮಾಡಿ ದಿನದಾಟದಂತ್ಯಕ್ಕೆ 301 ರನ್ ಸೇರಿಸಿ ಆಲೌಟ್ ಆಯಿತು. ಈ ವೇಳೆ ತಂಡಕ್ಕೆ ಆಧಾರವಾದರೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ 18 ವರ್ಷದ ಯುವ ಆಟಗಾರ ಆಂಡ್ರೆ ಸಿದ್ಧಾರ್ಥ್.

ಜನವರಿ 23 ರಂದು ಪ್ರಾರಂಭವಾದ ಪಂದ್ಯದಲ್ಲಿ ಚಂಡೀಗಢ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಅಷ್ಟೇ ಅಲ್ಲ ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇವರು ಮನಮೋಹಕ ಇನಿಂಗ್ಸ್ ಕಂಡು ತವರು ತಂಡದ ಅಭಿಮಾನಿಗಳು ಫುಲ್ ಖುಷ್ ಆದರು.
126 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಕಂಷಕ್ಟದಲ್ಲಿದ್ದ ತಂಡಕ್ಕೆ ಆಂಡ್ರೆ ಸಿದ್ಧಾರ್ಥ್ ಹಾಗೂ ಅನುಭವಿ ಬಾಬಾ ಇಂದ್ರಜೀತ್ ಆಧಾರವಾದರು. ಈ ಜೋಡಿಯ ಸೊಗಸಾದ ಆಟದ ನೆರವಿನಿಂದ ತಮಿಳುನಾಡು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿತು. ಈ ಜೋಡಿ ಸುಮಾರು 30 ಓವರ್ ಬ್ಯಾಟ್ ಮಾಡಿ ಎದುರಾಳಿ ಬೌಲರ್‌ಗಳನ್ನು ಕಾಡಿತು. ಅಲ್ಲದೆ ವಿಕೆಟ್ ಬೀಳದಂತೆ ನೋಡಿಕೊಂಡಿತು. ಐದನೇ ವಿಕೆಟ್‌ಗೆ ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಇಂದ್ರಜೀತ್ 3 ಬೌಂಡರಿ ಸೇರಿದಂತೆ 49 ರನ್ ಬಾರಿಸಿ ಔಟ್ ಆದರು.
ಆಂಡ್ರೆ ಸಿದ್ಧಾರ್ಥ್ ಗುರುವಾರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಮ್ಮ ಆಟದ ಶೈಲಿಯನ್ನು ಒಮ್ಮೆ ಎಲ್ಲರಿಗೂ ತೊರಿಸುವಂತೆ ಬ್ಯಾಟ್ ಮಾಡಿದ ಯಂಗ್ ಬಾಯ್ ಅಬ್ಬರಿಸಿದರು. ಇವರು 143 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ 106 ರನ್ ಸಿಡಿಸಿ ಔಟ್ ಆದರು.
ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಸಿದ್ಧಾರ್ಥ್ 400 ಕ್ಕೂ ಹೆಚ್ಚು ರನ್ ಬಾರಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳು ಸೇರಿವೆ. ಇನ್ನು ಇವರು ಈಗಾಗಲೇ ಲೀಸ್ಟ್ ಎ ಪಂದ್ಯಗಳನ್ನು ಸಹ ಆಡಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿದ ಚೆನ್ನೈ 30 ಲಕ್ಷ ರೂಪಾಯಿ ನೀಡಿ ಇವರಿಗೆ ತಮ್ಮ ತಂಡಕ್ಕೆ ಬರ ಮಾಡಿಕೊಂಡಿದೆ.