2003ರ ವಿಶ್ವಕಪ್ ಬಳಿಕ ಜಿಂಬಾಬ್ವೆ ತಂಡವನ್ನು ತೊರೆದ ಆಂಡಿ ಫ್ಲವರ್ ವಿಶ್ವದ ಹಲವು ರಾಷ್ಟ್ರೀಯ ಮತ್ತು ಲೀಗ್‌ಗಳ ತಂಡಗಳಿಗೆ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಹಲವು ತಂಡಗಳ ಯಶಸ್ಸಿಗೆ ಕಾರಣವಾಗಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.
ಚೊಚ್ಚಲ ಆವೃತ್ತಿಯಲ್ಲೇ ಕೆಎಲ್ ರಾಹುಲ್ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಕಳೆದ ಆವೃತ್ತಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತಂಡದ ತಯಾರಿ ಬಗ್ಗೆ ಕೋಚ್ ಆಂಡಿ ಫ್ಲವರ್ ಮಾತನಾಡಿದ್ದಾರೆ, "ನಾವು ಗೆಲ್ಲಲು ಇಲ್ಲಿದ್ದೇವೆ ಮತ್ತು ಹೊಸ ಆವೃತ್ತಿಯಲ್ಲಿ ಇದು ನಮ್ಮ ಸರಳ ಯೋಜನೆಯಾಗಿದೆ" ಎಂದು ಫ್ಲವರ್ ಹೇಳಿದರು.

"ತವರಿನಲ್ಲಿ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಗೆಲುವು ಸಾಧಿಸುವ ಉದ್ದೇಶದಲ್ಲಿದ್ದೇವೆ. ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಕಳೆದ ಆವೃತ್ತಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ, ಈ ಆವೃತ್ತಿಯಲ್ಲಿ ಕೂಡ ಅದೇ ಆಟವನ್ನು ಮುಂದುವರೆಸಬೇಕೆಂದು ನಿರೀಕ್ಷೆ ಮಾಡುತ್ತಿರುವುದಾಗಿ" ಅವರು ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಬಲವಾಗಿದೆ
ಹೊಸ ಸವಾಲುಗಳನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಪ್ರಬಲವಾದ ತಂಡವಾಗಿದೆ. ಆದರೆ ನಾನು ನಮ್ಮ ಶಕ್ತಿಯನ್ನು ನಂಬಿಕೊಂಡಿದ್ದೇವೆ. ತಂಡದಲ್ಲಿ ಅತ್ಯುತ್ತಮ ವೇಗದ ಬೌಲರ್ ಗಳು, ಸ್ಪಿನ್ನರ್‌ಗಳು ಮತ್ತು ಬ್ಯಾಟರ್‌ಗಳನ್ನು ತಂಡದಲ್ಲಿ ಹೊಂದಿದ್ದೇವೆ. ಯಾವುದೇ ಸವಾಲನ್ನು ಎದುರಿಸಲು ತಂಡದ ಆಟಗಾರರು ಸಮರ್ಥವಾಗಿದ್ದಾರೆ ಎಂದು ಆಂಡಿ ಫ್ಲವರ್ ಹೇಳಿದರು.
ನಾವು ಪ್ರತಿಸ್ಫರ್ಧಿ ತಂಡದ ಪ್ರತಿಯೊಬ್ಬ ಆಟಗಾರರಿಗೂ ಯೋಜನೆಗಳನ್ನು ರೂಪಿಸಿದ್ದೇವೆ. ಮೊದಲನೇ ಪಂದ್ಯವನ್ನು ಗೆಲುವಿನ ಮೂಲಕ ಪ್ರಾರಂಭಿಸುವ ಉತ್ಸಾಹದಲ್ಲಿದ್ದೇವೆ. ತವರಿನ ಲಾಭವನ್ನು ಪಡೆದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ತಂಡದ ನಾಯಕ ಕೆಎಲ್ ರಾಹುಲ್‌ಗೆ ಆಂಡಿ ಫ್ಲವರ್ ಬೆಂಬಲ ಸೂಚಿಸಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಕೆಎಲ್ ರಾಹುಲ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್, ಇಡೀ ತಂಡಕ್ಕೆ ಪ್ರೇರಕ ಮತ್ತು ಸ್ಫೂರ್ತಿ. ಅವರು ಕಳೆದ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಎಲ್‌ಎಸ್‌ಹಿ ತಂಡ ಉತ್ತಮ ಗೆಲುವು ಸಾಧಿಸಿ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಕೆಎಲ್ ರಾಹುಲ್ ಮತ್ತು ನನ್ನ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಅವರು ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಲಿದ್ದಾರೆ, ಈ ಬಾರಿ ಕೂಡ ಉತ್ತಮ ಬ್ಯಾಟಿಂಗ್ ಮಾಡುವ ಉತ್ಸಾಹದಲ್ಲಿದ್ದಾರೆ."

ಇಂಪ್ಯಾಕ್ಟ್ ಪ್ಲೇಯರ್ ಆಸಕ್ತಿದಾಯಕ
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಕೂಡ ಆಂಡಿ ಫ್ಲವರ್ ಮಾತನಾಡಿದ್ದಾರೆ. ಹೊಸ ನಿಯಮ ಆಸಕ್ತಿದಾಯಕವಾಗಿದೆ. ಪರಿಣಾಮ ಆಟಗಾರನನ್ನು ಹೆಸರಿಸಲು, ಪ್ರತಿ ತಂಡ ಸಾಕಷ್ಟು ಸಂಶೋಧನೆ ಮಾಡಬೇಕಾಗುತ್ತದೆ. ಇದು ಪಂದ್ಯಗಳಲ್ಲಿ ಬೆಂಚ್ ಶಕ್ತಿಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಹೊಸ ನಿಯಮದಿಂದ ಆಟ ಇನ್ನಷ್ಟು ರೋಚಕವಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದಾರೆ.
ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿರುವ ನಾಯಕ ರಾಹುಲ್ ಅವರಂತಹ ಟೀಂ ಇಂಡಿಯಾ ಆಟಗಾರರ ಕೆಲಸದ ಹೊರೆ ನಿರ್ವಹಣೆಯ ಕುರಿತು ಮಾತನಾಡಿರುವ ಆಂಡಿ ಫ್ಲವರ್, ಇದುವರೆಗೆ ಬಿಸಿಸಿಐ ಅಥವಾ ಟೀಮ್ ಮ್ಯಾನೇಜ್‌ಮೆಂಟ್‌ನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳಿದರು.