ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಹೋರಾಟ ನಡೆಯುತ್ತಿದೆ. ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿರುವ ಶ್ರೀಲಂಕಾ ತಂಡ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವ ನಿರೀಕ್ಷೆಯಲ್ಲಿದೆ. ಇದೇ ವೇಳೆ ಶ್ರೀಲಂಕಾದ ಸ್ಟಾರ್ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ವಿಶೇಷ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಶ್ರೀಲಂಕಾ ಪರ 8000 ರನ್ ಪೂರೈಸಿದ ದಾಖಲೆಯನ್ನು ಮಾಡಿದ್ದಾರೆ.
ಅನುಭವಿ ಏಂಜೆಲೊ ಮ್ಯಾಥ್ಯೂಸ್ ಶ್ರೀಲಂಕಾ ಪರ 8000 ರನ್ ಪೂರೈಸಿದ ಮೂರನೇ ಆಟಗಾರ. ಅವರು ತಮ್ಮ ಹೆಸರನ್ನು ಮಾಜಿ ದಿಗ್ಗಜ ಬ್ಯಾಟರ್‌ಗಳಾದ ಮಹೇಲಾ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರರ ಕ್ಲಬ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಮಹೇಲಾ ಜಯವರ್ಧನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 11814 ರನ್ ಗಳಿದರೆ, ಕುಮಾರ್ ಸಂಗಕ್ಕಾರ್ 12400 ರನ್ ಕಲೆ ಹಾಕಿದ್ದಾರೆ.

ಏಂಜೆಲೊ ಮ್ಯಾಥ್ಯೂಸ್ ಶ್ರೀಲಂಕಾದ ಹಿರಿಯ ಆಟಗಾರರಲ್ಲಿ ಒಬ್ಬರು. ಅವರು 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಮ್ಯಾಥ್ಯೂಸ್ ಶ್ರೀಲಂಕಾದ ಬೆನ್ನೆಲುಬು ಎಂಬುದನ್ನು ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಮ್ಯಾಥ್ಯೂಸ್ ಅವರಿಗೆ ಟೆಸ್ಟ್‌ನಲ್ಲಿ 8 ಸಾವಿರ ರನ್ ಪೂರೈಸಲು 34 ರನ್‌ಗಳ ಅಗತ್ಯವಿತ್ತು. ದಕ್ಷಿಣ ಆಫ್ರಿಕಾದ ಎರಡನೇ ದಿನದಾಟದ ಅಂತ್ಯಕ್ಕೆ ಮ್ಯಾಥ್ಯೂಸ್ 40 ರನ್ ಗಳಿಸಿದ್ದರು. ಈ ಮೂಲಕ ಅವರು ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು ಮಾಡಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮ್ಯಾಥ್ಯೂಸ್ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಿದೆ. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 358 ರನ್ ಗಳಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಶ್ರೀಲಂಕಾ ಅದ್ಭುತ ಆರಂಭವನ್ನು ಪಡೆದಿತ್ತು. ಪಾತುಮ್ ನಿಸ್ಸಾಂಕಾ 89 ರನ್‌ಗಳನ್ನು ಕಲೆ ಹಾಕಿದರು. ಇದಾದ ಬಳಿಕ ದಿನೇಶ್ ಚಾಂಡಿಮಾಲ್ ಕೂಡ 44 ರನ್ ಗಳಿಸಿದರು. ಸದ್ಯ ಶ್ರೀಲಂಕಾ ತಂಡ 116 ರನ್‌ಗಳ ಹಿನ್ನಡೆಯಲ್ಲಿದೆ. ಈಗ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಮ್ಯಾಥ್ಯೂಸ್ ಮತ್ತು ಮೆಂಡಿಸ್ ಮೇಲಿದೆ.
ಮ್ಯಾಥ್ಯೂಸ್ ಅವರ ವೃತ್ತಿಜೀವನದ ಬಗ್ಗೆ ನೋಡುವುದಾದರೆ 2009 ರಿಂದ ಇಲ್ಲಿಯವರೆಗೆ ಶ್ರೀಲಂಕಾ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತ ಬಂದಿದ್ದಾರೆ. ಅವರು ಇಲ್ಲಿಯವರೆಗೆ 226 ಏಕದಿನ ಪಂದ್ಯಗಳನ್ನು ಆಡಿದ್ದು, 5916 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗು 40 ಅರ್ಧಶತಕಗಳು ಕೂಡಿವೆ. ಇದಲ್ಲದೇ 90 ಟಿ20 ಪಂದ್ಯಗಳನ್ನಾಡಿದ್ದು 1416 ರನ್ ಬಾರಿಸಿದ್ದಾರೆ. ಇದೀಗ ಟೆಸ್ಟ್‌ನಲ್ಲೂ ಅವರ ಹೆಸರಿನಲ್ಲಿ ದೊಡ್ಡ ಸಾಧನೆ ದಾಖಲಾಗಿದ್ದು, ಶ್ರೀಲಂಕಾ ಪರ ಮ್ಯಾಥ್ಯೂಸ್ 8 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿರುವ ಅವರು, 1 ದ್ವಿಶತಕ, 16 ಶತಕಗಳು ಮತ್ತು 44 ಅರ್ಧಶತಕಗಳನ್ನು ಸಿಡಿಸಿದ್ದಾರೆ.