ನವದೆಹಲಿ: ಬಾರ್ಡರ್ ಗವಾಸ್ಕರ್ ಸರಣಿಯ ಮೇಲೆ ಎಲ್ಲರ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನವೆಂಬರ್ ನಿಂದ ನಿರೀಕ್ಷಿತ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಮಹತ್ವದಾಗಿದೆ. ಹೀಗಾಗಿ ಉಭಯ ತಂಡಗಳು ಈ ಸರಣಿ ಗೆಲ್ಲುವಿನತ್ತ ಚಿತ್ತ ನೆಟ್ಟಿವೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹಿಂದೆ ಸರಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವೇಳೆ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಹಲವು ಆಟಗಾರರ ಹೆಸರುಗಳನ್ನು ಸೂಚಿಸಲಾಗುತ್ತಿದೆ. ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಬೇಕು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ್ದರು. ಆಗ ಅವರು ಭಾರತದ ಪರ ಮೆಲ್ಬೋರ್ನ್‌ನಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಶುಭಮನ್ ಗಿಲ್ ಟೀಮ್ ಇಂಡಿಯಾದ ಪರ 17 ಟೆಸ್ಟ್ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದಾರೆ. ಬಳಿಕ ಅವರು ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಥಾನಕ್ಕೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ನ್ಯಾಯ ತುಂಬಿದ್ದಾರೆ.
ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಲ್ಲಿ ಅಲಭ್ಯರಾಗಿರುವ ಹಿನ್ನೆಲೆ, ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಅನಿಲ್ ಕುಂಬ್ಳೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಗಿಲ್ ಅವರನ್ನು ಆಸೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೂರನೇ ಕ್ರಮಾಂಕದಲ್ಲೇ ಆಡಿಸಬೇಕು ಎಂದು ತಿಳಿಸಿದ್ದಾರೆ.

ಶುಭಮನ್ ಗಿಲ್ ಅವರ ಬಗ್ಗೆ ಮಾತನಾಡಿರುವ ಸ್ಪಿನ್ ಮಾಂತ್ರಿಕ ಕುಂಬ್ಳೆ, ನಿಜಕ್ಕೂ ಅವರೊಬ್ಬ ಟ್ಯಾಲೆಂಟೆಡ್ ಬ್ಯಾಟರ್. ಅವರಲ್ಲಿ ಸ್ಕಿಲ್ ಸಹ ಚೆನ್ನಾಗಿದೆ. ಈಗಾಗಲೇ ಇವರು ಆಸೀಸ್ ಪ್ರವಾಸವನ್ನು ಮಾಡಿದ್ದಾರೆ. ಕಾಂಗರೂ ನಾಡಿನಲ್ಲಿ ಮೂರು ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಅನಿಸಿದ ಹಾಗೆ ಗಿಲ್ ಮೂರನೇ ಕ್ರಮಾಂಕವನ್ನು ಬಿಟ್ಟು ಓಪನ್ ಮಾಡಬಾರದು. ತಂಡದಲ್ಲಿ ಇನಿಂಗ್ಸ್ ಆರಂಭಿಸುವ ಆಯ್ಕೆಗಳು ಇವೆ. ಕೆ.ಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಕ್ಷಮತೆಯನ್ನು ಹೊಂದಿದ್ದಾರೆ. ದ್ರಾವಿಡ್ ಸಹ ಕೆಲವು ಪಂದ್ಯಗಳಲ್ಲಿ ಇನಿಂಗ್ಸ್ ಓಪನ್ ಮಾಡಿದ್ದರು. ಈ ಮೂಲಕ ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡಿ ರನ್ ಕಲೆ ಹಾಕಿದ್ದರು ಎಂದು ನೆನೆದಿದ್ದಾರೆ.
ಗಿಲ್ ಮೂರನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ ಆಟಗಾರ. ರಾಹುಲ್ ದ್ರಾವಿಡ್, ಚೇತೇಶ್ವರ್ ಪೂಜಾರ ಬಳಿಕ ಈ ಸ್ಥಾನದ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿರುವ ಪ್ಲೇಯರ್. ಗಿಲ್ ಅವರ ಕ್ರಮಾಂಕವನ್ನು ಬದಲಿ ಮಾಡಬಾರದು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಗಿಲ್ ಅವರಿಗೆ ಮೂರನೇ ಸ್ಥಾನದಲ್ಲಿ ಆಡಲು ಬಿಟ್ಟು, ಬೇರೆ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಅನಿಲ್ ಕುಂಬ್ಳೆ ಅವರ ವಾದವಾಗಿದೆ.