ಟೀಮ್ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್ ಬ್ಯಾಟರ್‌ಗಳು ಒಂದು ವಾರದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನವೇ ಸ್ಟಾರ್ ಆಟಗಾರರು ನಿವೃತ್ತಿ ಘೋಷಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇವರಿಬ್ಬರ ನಿವೃತ್ತಿಯ ಬಗ್ಗೆ ಹಲವು ಆಟಗಾರರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಸಹ ಈ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ದಿಢೀರ ನಿವೃತ್ತಿ ಪಡೆದಿರುವುದು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಗೆ ಅಚ್ಚರಿಗೊಳಿಸಿದೆ. ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರು ಮೈದಾನದಲ್ಲಿ ನಿವೃತ್ತಿ ಘೋಷಿಸಬೇಕಿತ್ತು ಎಂದು ಸ್ಪಿನ್ ಬೌಲರ್ ತಿಳಿಸಿದ್ದಾರೆ.

ಇವರಿಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಆಶ್ಚರ್ಯದ ಸಂಗತಿ. ಕೆಲವೇ ದಿನಗಳ ಅಂತರದಲ್ಲಿ ಶ್ರೇಷ್ಠ ಆಟಗಾರರು ನಿವೃತ್ತಿ ಹೊಂದಿರುವುದ ನಂಬಲಾಗದ ಸಂಗತಿ. ಇವರಿಬ್ಬರೂ ಇನ್ನು ಕೆಲವು ವರ್ಷಗಳ ಕಾಲ ಭಾರತ ಟೆಸ್ಟ್ ತಂಡದ ಪರ ಆಡಬಹುದಿತ್ತು. ಆದರೆ ಅವರಿಬ್ಬರೂ ನಿರ್ಣಯ ಮಾಡಿದ್ದಾರೆ. ಇವರಿಬ್ಬರೂ ಇನ್ನು ಏಕದಿನ ಸ್ವರೂಪದಲ್ಲಿ ಮಾತ್ರ ಕಾಣಿಸಿಕೊಳಲಿದ್ದಾರೆ. ಆಟಗಾರನಿಗೆ ನಿವೃತ್ತಿ ನಿರ್ಧಾರ ಪ್ರಕಟಿಸುವುದು ಕಷ್ಟದ ವಿಷಯ. ಅಂತಿಮವಾಗಿ ಅವರು ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅನಿಲ್ ಕುಂಬ್ಳೆ ಇಎಸ್‌ಪಿಎನ್ ಕ್ರಿಕ್‌ಇನ್ಫೊಗೆ ತಿಳಿಸಿದ್ದಾರೆ.
ರೋಹಿತ್, ವಿರಾಟ್, ಅಶ್ವಿನ್ ಮೈದಾನದಲ್ಲಿ ವಿದಾಯ ಹೇಳಬೇಕಿತ್ತು ಎಂದು ನಾನು ಭಾವಿಸುವೆ. ಇದಕ್ಕೆ ಸಂಬಂಧಪಟ್ಟವರು ಈ ಬಗ್ಗೆ ಯೋಚಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ತಮ್ಮ ನೆಚ್ಚಿನ ಆಟಗಾರರನ್ನು ಮೈದಾನದಲ್ಲಿ ವಿದಾಯದಲ್ಲಿ ಹೇಳಲು ಅಭಿಮಾನಿಗಳು ಬಯಸುತ್ತಾರೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಟೀಮ್ ಇಂಡಿಯಾ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಲಿದೆ. ಈ ಪ್ರವಾಸದಲ್ಲಿ ಕೊಹ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದಿತ್ತು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರಲ್ಲಿ ಒಬ್ಬರು ಇಂಗ್ಲೆಂಡ್ ವಿರುದ್ಧದ ಪ್ರವಾಸದಲ್ಲಿ ಇರಬೇಕಿತ್ತು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿರುವ ಇಂಗ್ಲೆಂಡ್ ಪ್ರವಾಸ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ನಾಯಕತ್ವದ ರೇಸ್‌ನಲ್ಲಿದ್ದ ಜಸ್ಪ್ರಿತ್ ಬುಮ್ರಾ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಸಂಯೋಜನೆ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.