ಒಂದೇ ವಿಮಾನದಲ್ಲಿ ಕುಂಬ್ಳೆ-ಅಭಿಮಾನಿಯ ಟ್ವಿಟರ್ ಮಾತುಕತೆಯ ಸ್ವಾರಸ್ಯ!

ಬೆಂಗಳೂರು, ಅಕ್ಟೋಬರ್ 10: ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರೋದು ಕಡಿಮೆ. ಆದರೆ ಅಭಿಮಾನಿಯೊಬ್ಬರ ಜೊತೆ ಅತ್ಮೀಯತೆ ಹಂಚಿಕೊಳ್ಳುವ ಮೂಲಕ ಕುಂಬ್ಳೆ ಸಾಮಾಜಿಕ ಜಾಲತಾಣದಲ್ಲಿ ಈಗ ಹೆಚ್ಚು ಸುದ್ದಿಯಲ್ಲಿದ್ದಾರೆ.
ಕ್ರಿಕೆಟಿಗರಿಗೆ ಭಾರತದಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಕ್ರಿಕೆಟಿಗರು ಎಲ್ಲೇ ಕಾಣಿಸಿಕೊಂಡರೂ ಅಭಿಮಾನಿಗಳು ಮಾತನಾಡಲು, ಕೈಕುಲುಕಲು, (ಆಟೋಗ್ರಾಫ್ ಔಟ್ ಡೇಟೆಡ್-ಅಪರೂಪಕ್ಕಷ್ಟೆ ಬಿಡಿ!), ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ. ಕುಂಬ್ಳೆ ವಿಮಾನಯಾನದಲ್ಲಿದ್ದಾಗ ಇಂಥದ್ದೊಂದು ಪ್ರಸಂಗವಾಗಿದೆ.
ಅಕ್ಟೋಬರ್ 9ರ ಮಂಗಳವಾರ ನಡೆದ ಘಟನೆಯಿದು. ಮುಂಬೈಗೆ ಹೊರಟಿದ್ದ ಕನ್ನಡಿಗ ಕುಂಬ್ಳೆ ಅವರು ಮುಂಬೈ-ಬೆಂಗಳೂರು ವಿಮಾನ ಪ್ರಯಾಣದಲ್ಲಿದ್ದರು. ಅದೇ ವಿಮಾನದಲ್ಲಿ ಕುಂಬ್ಳೆಯ ಸಾಕಷ್ಟು ಅಭಿಮಾನಿಗಳಿದ್ದರು. ಅದರಲ್ಲಿ ನಾಚಿಕೆ ಮುದ್ದೆಯೊಬ್ಬಳು ಕುಂಬ್ಳೆ ಜೊತೆ ಮಾತನಾಡಲಾಗದೆ ಟ್ವೀಟ್ ಮಾಡಿದ್ದರು. ಅದಕ್ಕೆ ಕುಂಬ್ಳೆ ಕೂಡ ಪ್ರತಿಕ್ರಿಯಿಸಿದ್ದ ಸ್ವಾರಸ್ಯಕರ ಸಂಗತಿ ನಡೆದಿತ್ತು.
ಕಣ್ಣು ಪಸೆಯಾಯ್ತು
ಕುಂಬ್ಳೆಯಿದ್ದ ಅದೇ ವಿಮಾನದಲ್ಲಿದ್ದ ಯುವತಿ 'ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ, ನಾನಿರುವ ಬೆಂಗಳೂರು-ಮುಂಬೈ ವಿಮಾನದಲ್ಲಿದ್ದಾರೆ. ಅವರನ್ನೊಮ್ಮೆ ದಿಟ್ಟಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವೊಂದರಲ್ಲಿ ಕುಂಬ್ಳೆ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಆಡಿದ್ದನ್ನು ನೆನಪಿಸಿಕೊಂಡಾಗ ಅದ್ಯಾಕೋ ಕಣ್ಣು ಪಸೆಯಾಯಿತು' ಎಂದು ಟ್ವೀಟ್ ಮಾಡಿದ್ದರು.
ಮಾತನಾಡಲೇಕೋ ಅಂಜಿಕೆ
ಮತ್ತೊಂದು ಟ್ವೀಟ್ ನಲ್ಲಿ ಅದೇ ಕುಂಬ್ಳೆ ಅಭಿಮಾನಿ ಸೋಹಿನಿ, 'ಕುಂಬ್ಳೆ ಇದ್ದೆಡೆಗೆ ಹೋಗಿ ಅವರಿಗೊಂದು ಹಾಯ್ ಮಾಡಬೇಕು. ಕ್ರಿಕೆಟ್ ಬಗೆಗಿನ ಸಿಹಿ ನೆನಪಿಗಳಿಗೆ, ಗೆಲುವುಗಳಿಗಾಗಿ ಧನ್ಯವಾದ ಹೇಳಬೇಕು ಅನ್ನಿಸುತ್ತಿದೆ. ಆದರೆ ಅದ್ಯಾಕೋ ಅಂಜಿಕೆಯಾಗುತ್ತಿದೆ' ಎಂದಿದ್ದರು.
ಸಂಕೋಚ ಬೇಡ, ಬನ್ನಿ ಹಾಯ್ ಅನ್ನಿ..
ಒಂದೇ ವಿಮಾನದಲ್ಲಿರುವ ಅಭಿಮಾನಿಯ ಚಡಪಡಿಕೆ, ತುಮುಲಭರಿತ ಟ್ವೀಟ್ ನೋಡಿದ ಕುಂಬ್ಳೆ, ಅಷ್ಟೇ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದಾರೆ. 'ಸಂಕೋಚ ಪಡಬೇಡಿ. ವಿಮಾನ ಟೇಕ್ ಆಫ್ ಆದ ಬಳಿಕ ಬಂದು ಹಾಯ್ ಹೇಳಿ' ಎಂದು ಟ್ವೀಟ್ ಮಾಡಿದ್ದರು.
ಬೋರ್ಡಿಂಗ್ ಪಾಸ್ ಗೆ ಅಂದ ಮೆತ್ತಿದೆ
ವಿಮಾನ ಟೇಕ್ ಆಫ್ ಆದ ಬಳಿಕ ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಅಭಿಮಾನಿ ಮಾತನಾಡಿಸಿದ್ದಷ್ಟೇ ಅಲ್ಲ, ಬೋರ್ಡಿಂಗ್ ಪಾಸ್ ನಲ್ಲಿ ಆಟೋಗ್ರಾಫ್ ಕೂಡ ತೆಗೆದುಕೊಂಡರು. ಆ ಬಳಿಕ ಟ್ವೀಟ್ ಮಾಡಿ, 'ನನ್ನ ಬೋರ್ಡಿಂಗ್ ಪಾಸ್ ಗೆ ಇನ್ನಷ್ಟು ಅಂದ ಮೆತ್ತಿಕೊಂಡಿದೆ. ಕುಂಬ್ಳೆಗೆ ಧನ್ಯವಾದಗಳು. ಒಂದು ದಿನ ನಿಮ್ಮಿಂದ ನಾನು ನಮ್ರತೆ ಕಲಿಯಬೇಕಿದೆ' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications