ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಎರಡನೇ ದಿನದ ಆಟ ಮುಗಿದಿದ್ದು, ಟೀಮ್ ಇಂಡಿಯಾ ಆಟಗಾರು ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್ ಗಳಿಸಿದರೆ, ಪ್ರವಾಸಿ ಬಾಂಗ್ಲಾದೇಶ ತಂಡವನ್ನು 149 ರನ್‌ಗಳಿಗೆ ಕಟ್ಟಿ ಹಾಕಿದೆ. ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದ್ದು, ತಂಡದ ಒಟ್ಟು ಮುನ್ನಡೆಯನ್ನು 308ಕ್ಕೆ ಏರಿಸಿದೆ. ಯಶಸ್ವಿ ಜೈಸ್ವಾಲ್ (10), ರೋಹಿತ್ ಶರ್ಮಾ (5) ಮತ್ತು ವಿರಾಟ್ ಕೊಹ್ಲಿ (17) ಔಟಾಗಿದ್ದಾರೆ.

ವಿರಾಟ್ 17 ರನ್ ಗಳಿಸಿ ಔಟಾದರೂ, ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮಾತ್ರ ಮಾಡಿರುವ ಬೃಹತ್ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ತವರು ನೆಲದಲ್ಲಿ 12 ಸಾವಿರ ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿ ಸಾಧನೆ ಗೈದಿದ್ದಾರೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ದಿನದಂದು ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ ಮಾಡುವಾಗ ಅವರು ಈ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಆಟಗಾರ ಕೊಹ್ಲಿ. ಅವರಿಗಿಂತ ಮೊದಲು, ಸಚಿನ್ ತೆಂಡೂಲ್ಕರ್ ತವರಿನಲ್ಲಿ ಆಡುವಾಗ 14 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಮಾದರಿಯಿಂದ ನಿವೃತ್ತಿ ಹೊಂದಿರುವ ಕೊಹ್ಲಿ, ಟೀಮ್ ಇಂಡಿಯಾ ಪರ 219ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ಅವರು 58.84ರ ಸರಾಸರಿಯಲ್ಲಿ 12 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದು, 38 ಶತಕಗಳು ಮತ್ತು 59 ಅರ್ಧ ಶತಕಗಳನ್ನು ಒಳಗೊಂಡಿವೆ. ಮತ್ತೊಂದೆಡೆ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ತವರಿನಲ್ಲಿ ಆಡುವಾಗ 258 ಪಂದ್ಯಗಳಲ್ಲಿ 50.32 ಸರಾಸರಿಯಲ್ಲಿ 14192 ರನ್ ಪೂರೈಸಿದ ನಂತರ ನಿವೃತ್ತರಾಗಿದ್ದಾರೆ. ತವರಿನಲ್ಲಿ ಸಚಿನ್ 42 ಶತಕ ಮತ್ತು 70 ಅರ್ಧ ಶತಕಗಳನ್ನು ಹೊಡೆದಿದ್ದಾರೆ.
ಸಚಿನ್ ತೆಂಡೂಲ್ಕರ್ - 14192 ರನ್
ವಿರಾಟ್ ಕೊಹ್ಲಿ - 12004 ರನ್
ರಾಹುಲ್ ದ್ರಾವಿಡ್ - 9004 ರನ್
ರೋಹಿತ್ ಶರ್ಮಾ - 8690 ರನ್
ವೀರೇಂದ್ರ ಸೆಹ್ವಾಗ್ - 7691 ರನ್