ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಒಬ್ಬರ ಮಗ ಈಗಾಗಲೇ ಕ್ರಿಕೆಟ್ ರಂಗದಲ್ಲಿ ತಮ್ಮ ಸದ್ದು ಮಾಡುತ್ತಿದ್ದಾರೆ. ಈಗ ಇವರ ಇನ್ನೊಬ್ಬ ಮಗ ಕ್ರಿಕೆಟ್ ಅಂಗಳವನ್ನು ಪ್ರವೇಶಿಸಲಿದ್ದಾರೆ. ಡಿಸೆಂಬರ್ 6 ರಿಂದ ಪ್ರಾರಂಭವಾಗುವ ವಿಜಯ್ ಮರ್ಚೆಂಟ್ ಟ್ರೋಫಿಗೆ ಕರ್ನಾಟಕದ ಸಂಭಾವ್ಯ ಆಟಗಾರ ತಂಡವನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರ ಎರಡನೇ ಮಗ ಅನ್ವಯ್ ದ್ರಾವಿಡ್ ಅವರು ಸ್ಥಾನ ಪಡೆದಿದ್ದಾರೆ.
ಕರ್ನಾಟಕದ ಸಂಭಾವ್ಯ ಆಟಗಾರರ ಪೈಕಿ ಅನ್ವಯ್ ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದಿದ್ದಾರೆ. ಪ್ರಕಟಿತ 35 ಸಂಭಾವ್ಯ ಆಟಗಾರರಲ್ಲಿ ಮೂವರು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಿದ್ದು, ಇದರಲ್ಲಿ ಅನ್ವಯ್ ಹೆಸರನ್ನು ಸೇರಿಸಲಾಗಿದೆ. ಇವರೊಂದಿಗೆ ಆದಿತ್ಯ ಝಾ ಮತ್ತು ಜೋಯ್ ಜೇಮ್ಸ್ ಸೇರಿದ್ದಾರೆ.

ಕಳೆದ ವರ್ಷದ ಅಂತರ ರಾಜ್ಯ ಟೂರ್ನಿಯಲ್ಲಿ ರಾಜ್ಯದ 14 ವರ್ಷ ವಯೋಮಿತಿಯ ತಂಡದ ನಾಯಕರಾಗಿದ್ದ ಅನ್ವಯ್ ದ್ರಾವಿಡ್ ಈಗ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಕೆಎಸ್‌ಸಿಎ 16 ವರ್ಷ ವಯೋಮಿತಿಯ ಅಂತರ ವಲಯ ಟೂರ್ನಿಯಲ್ಲಿ ತುಮಕೂರು ವಲಯದ ವಿರುದ್ಧ ಅನ್ವಯ್ ದ್ರಾವಿಡ್ ಅಜೇಯ 200 ರನ್ ಸಿಡಿಸಿದ್ದರು. ಇವರು ಬೆಂಗಳೂರು ವಲಯದ ಪರ ಬ್ಯಾಟ್ ಮಾಡಿದ್ದರು. ಇವರ ಅಣ್ಣ ಸಮಿತ್ ಸದ್ಯ ಬರೋಡಾ ವಿರುದ್ಧ ವಡೋದರದಲ್ಲಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ಪರ ಆಡುತ್ತಿದ್ದಾರೆ.
ಸಮಿತ್ ದ್ರಾವಿಡ್ ಈಗಾಗಲೇ ಕ್ರಿಕೆಟ್ ಮೈದಾನದಲ್ಲಿ ತಮ್ಮ ಧಮಾಕೆದಾರ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚಿಗೆ ಅವರು ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೆ ಇವರು ರಾಜ್ಯದಲ್ಲಿ ನಡೆದ ಮಹಾರಾಜ ಟ್ರೋಫಿ ಪ್ರಶಸ್ತಿ ಗೆದ್ದ ಮೈಸೂರು ವಾರಿಯರ್ಸ್ ತಂಡದ ಸದಸ್ಯರೂ ಹೌದು. ಆದರೆ ಇವರು ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ಸಮಿತ್ ಆಡಿದ 7 ಪಂದ್ಯಗಳಲ್ಲಿ 82 ರನ್ ಗಳಿಸಿದ್ದರು. 33 ರನ್ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಅವರಿಂದ ಉತ್ತಮ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು.

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ಆಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿತ್ತು. ಅಲ್ಲದೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಕಂಡಿತ್ತು. ಆದರೆ ಭಾರತ ತಂಡ ಅಮೆರಿಕ, ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತು. ಪ್ರಶಸ್ತಿ ಸುತ್ತಿನ ಕದಾಟದಲ್ಲಿ ರೋಹಿತ್ ಶರ್ಮಾ ಪಡೆ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದಿತ್ತು.