ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಿದ್ದಾರೆ. ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ವಿಜಯ್ ಮರ್ಚಂಟ್ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಶತಕ ಬಾರಿಸಿದ್ದಾರೆ. ಕರ್ನಾಟಕದ ಪರ ಬ್ಯಾಟ್ ಮಾಡಿರುವ ಅನ್ವಯ್ ಆರ್ಭಟ ಕಂಡು ಮಾಜಿ ಆಟಗಾರರು ಶ್ಲಾಘಿಸಿದ್ದಾರೆ. ಮುಳಪಾಡುವಿನ ಡಿವಿಆರ್ ಮೈದಾನದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಸ್ಥಿರ ಪ್ರದರ್ಶನ ನೀಡಿ ಡ್ರಾ ಸಾಧಿಸಿದ್ದು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರಾದ ಮೇಲೆ ಕರ್ನಾಟಕ ಮೂರು ಅಂಕ ಕಲೆ ಹಾಕಿತು.
ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ಮೊದಲ ಇನಿಂಗ್ಸ್‌ನಲ್ಲಿ 387 ರನ್ ಸೇರಿಸಿತು. ಇನ್ನು ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 441 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜೂನಿಯರ್ ದ್ರಾವಿಡ್ ಶತಕದ ಸಹಾಯದಿಂದ ಕರ್ನಾಟಕ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಕರ್ನಾಟಕದ ಪರ ಆರಂಭಿಕ ಆಟಗಾರರಾದ ಆರ್ಯ ಗೌಡ, ಧ್ರುವ ಕೃಷ್ಣ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಜಾರ್ಖಂಡ್ ಬೌಲರ್‌ಗಳನ್ನು ಕಾಡಿ ಅಬ್ಬರಿಸಿತು. ಈ ಜೋಡಿ 434 ಎಸೆತಗಳಲ್ಲಿ 229 ರನ್ ಸಿಡಿಸಿತು. ಆರ್ಯ ಗೌಡ 18 ಬೌಂಡರಿಗಳ ನೆರವಿನಿಂದ 104 ರನ್ ಸಿಡಿಸಿದರು. ಧ್ರುವ್ ಕೃಷ್ಣ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ 122 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಮೂರನೇ ವಿಕೆಟ್‌ಗೆ ಶ್ಯಾಮಂತಕ್ ಅನಿರುದ್ಧ್ ಹಾಗೂ ಅನ್ವಯ್ ದ್ರಾವಿಡ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 275 ಎಸೆತಗಳಲ್ಲಿ 167 ರನ್ ಸಿಡಿಸಿ ತಂಡವನ್ನು ಇನಿಂಗ್ಸ್ ಮುನ್ನಡೆ ಸಾಧಿಸಲು ಕಾರಣರಾದರು. ಶ್ಯಾಮಂತಕ್ ಅನಿರುದ್ಧ್ 13 ಬೌಂಡರಿ ನೆರವಿನಿಂದ 76 ರನ್ ಸಿಡಿಸಿ ಔಟ್ ಆದರು. ಅನ್ವಯ್ ದ್ರಾವಿಡ್ ಅವರು ಅಬ್ಬರದ ಆಟವನ್ನು ಆಡಿದರು. ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಸಾಬೀತು ಪಡಿಸಿದ ಅನ್ವಯ್ 153 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 100 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಡಿಯಲ್ಲಿ ಆಡಲಾಗುವ ಹಲವು ವಯೋಮಿತಿಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷದ ಅಂಡರ್ 14 ತಂಡವನ್ನು ಮುನ್ನಡೆಸಿದ್ದ ಅನ್ವಯ್, ಬೆಂಗಳೂರು ವಲಯದ ಪರ ಅಜೇಯ 200 ರನ್ ಸಿಡಿಸಿದರು. ತುಮಕೂರು ಪ್ರದೇಶದ ವಿರುದ್ಧ ಅನ್ವಯ್ ಭರ್ಜರಿ ದ್ವಿಶತಕ ಬಾರಿಸಿ ಸುದ್ದಿಯಾದರು. ಇನ್ನು ರಾಹುಲ್ ದ್ರಾವಿಡ್ ಅವರ ಇನ್ನೊಬ್ಬ ಮಗ ಸಮಿತ್ ಈಗಾಗಲೇ ಕರ್ನಾಟಕದ ತಂಡದ ಪರ ಹಲವು ವಯೋಮಿತಿ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.