ಗ್ವಾಲಿಯರ್: ಟೀಮ್ ಇಂಡಿಯಾದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್, ತಮ್ಮ ಬಿಗುವಿನ ದಾಳಿಯ ಮೂಲಕ ಭರವಸೆ ಮೂಡಿಸಿರುವ ಆಟಗಾರ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಅಮೋಘ ದಾಳಿಯನ್ನು ಸಂಘಟಿಸುವಲ್ಲಿ ಹೆಸರುವಾಸಿ. ಇವರು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಂತಹದ್ದೇ ಅಮೋಘ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟಿ20 ಪಂದ್ಯ ನ್ಯೂ ಸವಾಯಿ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್‌ಗಳಿಂದ ಬಾಂಗ್ಲಾ ತಂಡವನ್ನು ಮಣಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಪರವಾಗಿ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಮೋಘ ದಾಳಿ ನಡೆಸಿದರು.

ಬಾಂಗ್ಲಾ ಆರಂಭಕ್ಕೆ ಅರ್ಷದೀಪ್ ಸಿಂಗ್ ಪೆಟ್ಟು ನೀಡಿದರು. ಇವರು ಪವರ್ ಪ್ಲೇನಲ್ಲಿ ಅಮೋಘ ದಾಳಿಯನ್ನು ಸಂಘಟಿಸಿ ಮಿಂಚಿದರು. ಪವರ್ ಪ್ಲೇನಲ್ಲಿ ಅರ್ಷದೀಪ್ ಬಾಂಗ್ಲಾದ ಇಬ್ಬರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಅರ್ಷದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಆಸ್ಟ್ರೇಲಿಯಾದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಅರ್ಷದೀಪ್ ಸಿಂಗ್ ಸದ್ಯ ಆರ್ಭಟ ನಡೆಸಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಇವರು ವಿಕೆಟ್ ಬೇಟೆ ನಡೆಸಿದ್ದಾರೆ. ಈ ವೇಳೆ ಇವರು ಆರಂಭಿಕ ಪವರ್ ಪ್ಲೇನಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪವರ್‌ಪ್ಲೇಯಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅರ್ಷ್‌ದೀಪ್ ಸಿಂಗ್ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 9ನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.

ಅರ್ಷದೀಪ್ ಸಿಂಗ್ ಈ ಮೂಲಕ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಿಮ್ ಸೌಥಿ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 13 ಬಾರಿ ಈ ಸಾಧನೆ ಮಾಡಿದ್ದಾರೆ.
ಅರ್ಷದೀಪ್ ಸಿಂಗ್ ತಮ್ಮ ಚೊಚ್ಚಲ ಪಂದ್ಯವನ್ನು ಅಡಿದಾಗಿನಿಂದಲೂ ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸುತ್ತಿದ್ದಾರೆ. ಅವರು 7 ಜುಲೈ 2022 ರಂದು T20 ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಇಲ್ಲಿಯವರೆಗೆ ಭಾರತದ ಪರ ಪವರ್‌ಪ್ಲೇನಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಆಗಿದ್ದಾರೆ. ಇವರು ಒಟ್ಟು 29 ವಿಕೆಟ್ ಪಡೆದಿದ್ದಾರೆ. ಭಾರತದ ಪರ ಅರ್ಷದೀಪ್ ಒಟ್ಟು 55 ಟಿ20 ಪಂದ್ಯಗಳನ್ನು ಆಡಿದ್ದು 86 ವಿಕೆಟ್ ಪಡೆದಿದ್ದಾರೆ. ಈ ವೇಳೆ ಎರಡು ಬಾರಿ ನಾಲ್ಕು ವಿಕೆಟ್ ಪಡೆದು ಬೀಗಿದ್ದಾರೆ.