ಭಾರತ ಕಿರಿಯರ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ವೇಳೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿದ್ದ, ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಕಣ್ಣು ಭರವಸೆಯ ಬೌಲರ್ ಅರ್ಷದೀಪ್ ಸಿಂಗ್ ಅವರ ಮೇಲೆ ನೆಟ್ಟಿದೆ. ಇವರು ಪ್ರಸಕ್ತ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ದಾಖಲೆಯ ಸನಿಹಕ್ಕೆ ಬಂದು ನಿಂತಿದ್ದಾರೆ.
ಸೂರ್ಯಕುಮಾರ್ ಯಾದವ್ ಪಡೆಯ ಅಂತ್ಯತ ಅನುಭವಿ ಬೌಲರ್ ಅರ್ಷದೀಪ್ ಸಿಂಗ್. ಇವರು ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ತಮ್ಮ ಪರ್ಫೆಕ್ಟ್ ಲೈನ್ ಹಾಗೂ ಲೆಂಥ್ ಮೂಲಕ ಎದುರಾಳಿಗಳ ನಿದ್ದೆ ಹಾಳು ಮಾಡಬಲ್ಲರು. ಇವರು ಸದ್ಯ ವಿಕೆಟ್ ಬೇಟೆಯಲ್ಲೂ ದಾಖಲೆಯನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಡರ್ಬನ್‌ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಒಂದು ವಿಕೆಟ್ ಕಬಳಿಸಿದ್ದ, ಅರ್ಷದೀಪ್ ಎರಡನೇ ಟಿ20 ಪಂದ್ಯದಲ್ಲೂ ಒಂದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆಯುವ ಸಾಧಕರ ಸಾಲಿಗೆ ಎಂಟ್ರಿ ನೀಡಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಟಿ20 ಬೌಲರ್ ಅರ್ಷದೀಪ್ ಸಿಂಗ್ ಅವರು ಪದಾರ್ಪಣೆ ಮಾಡಿದ ದಿನದಿಂದಲೂ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.
ಅರ್ಷದೀಪ್ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ವೇಳೆ 8 ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲರಾದರೆ, ದೊಡ್ಡ ಇತಿಹಾಸ ನಿರ್ಮಿಸಬಹುದು. ಟಿ20 ಕ್ರಿಕೆಟ್‌ನಲ್ಲಿ ಅರ್ಷದೀಪ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ.
ಅರ್ಷದೀಪ್ ಸಿಂಗ್ 2022 ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದರು. 2022ರಲ್ಲಿ 33 ವಿಕೆಟ್‌ಗಳು, 2023ರಲ್ಲಿ 26 ವಿಕೆಟ್‌ಗಳು ಮತ್ತು 2024ರಲ್ಲಿ ಇಲ್ಲಿಯವರೆಗೆ ಒಟ್ಟು 30 ವಿಕೆಟ್‌ಗಳನ್ನು ಪಡೆದಿದ್ದಾರೆ. ಅರ್ಷದೀಪ್ ಸಿಂಗ್ ಟೀಂ ಇಂಡಿಯಾ ಪರ 58 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 89 ವಿಕೆಟ್ ಪಡೆದಿದ್ದಾರೆ. ಇನ್ನೂ 8 ವಿಕೆಟ್ ಪಡೆದರೆ ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್ ಪಡೆದಿದ್ದಾರೆ.

ಬುಧವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಸೆಂಚುರಿಯನ್‌ನಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಕಾಂಬಿನೇಷನ್‌ನಲ್ಲಿ ಅಂಗಳಕ್ಕೆ ಇಳಿಯುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯನ್ನು ಮಾಡಿದರೆ, ಆರ್‌ಸಿಬಿಯ ಬೌಲರ್ ಯಶ್ ದಯಾಳ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಬಹುದು.