ಭಾರತದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಪ್ರಸ್ತುತ ಮೂರು ಪಂದ್ಯಗಳ ಟಿ20 ಸರಣಿ ಆಡಲು ಐರ್ಲೆಂಡ್ ಪ್ರವಾಸದಲ್ಲಿದ್ದಾರೆ. ಅರ್ಷದೀಪ್ ಮೊದಲ ಟಿ20 ಪಂದ್ಯದಲ್ಲಿ ಆಡುವ ತಂಡದ ಭಾಗವಾಗಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಹೊಸ ಚೆಂಡಿನೊಂದಿಗೆ ಸೊಗಸಾದ ದಾಳಿ ಸಂಘಟಿಸುತ್ತಿರುವ ಅರ್ಷದೀಪ್ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಸಫಲರಾಗಿದ್ದಾರೆ. ಆದರೆ, ಡೆತ್ ಓವರ್ಗಳಲ್ಲಿ ಕಮಾಲ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್‌ನಲ್ಲಿ ಸ್ಲಾಗ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಿ ಮನ ಗೆದ್ದಿದ್ದ ಎಡಗೈ ವೇಗಿ ಈಗ ಲಯ ಕಳೆದುಕೊಂಡಿದ್ದಾರೆ.
ಆರಂಭಿಕ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಿ ಬ್ಯಾಟರ್ಗಳನ್ನು ಕಾಡುವ ಅರ್ಷದೀಪ್ ಡೆತ್ ಓವರ್ಗಳಲ್ಲಿ ದುಬಾರಿ ಅಗುತ್ತಿದ್ದಾರೆ. ಅರ್ಷದೀಪ್ ಮೊದಲ 15 ಓವರ್ಗಳಲ್ಲಿ 7.72ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಆದರೆ ಡೆತ್ ಓವರ್ ಗಳಲ್ಲಿ ಇವರ ಸರಾಸರಿ ಉತ್ತಮವಾಗಿಲ್ಲ. ಕೊನೆಯ ನಾಲ್ಕು ಓವರ್ಗಳಲ್ಲಿ ಅರ್ಷದೀಪ್ 9.87ರ ಸರಾಸರಿಯಲ್ಲಿ ರನ್‌ಗಳನ್ನು ನೀಡಿದ್ದಾರೆ.
ಈ ಸರಾಸರಿಯನ್ನು ನೋಡಿದರೆ ಅರ್ಷದೀಪ್ ಡೆತ್ ಓವರ್ಗಳಲ್ಲಿ ಬೌಲಿಂಗ್ ನೀಡುವುದು ದುಬಾರಿ ಎನಿಸುತ್ತದೆ. ಇನ್ನು ಅರ್ಷದೀಪ್ ತಮ್ಮ ಬಿಗುವಿನ ದಾಳಿಯನ್ನು ಐಪಿಎಲ್‌ನಲ್ಲಿ ಪ್ರದರ್ಶಿಸಿದ್ದರು. ಇವರ ಅಮೋಘ ದಾಳಿಯ ಪರಿಣಾಮ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದರು.
ಮೊದಲ ಪಂದ್ಯದಲ್ಲಿ ದುಬಾರಿಯಾದ ಅರ್ಷದೀಪ್
ಐರ್ಲೆಂಡ್ ಪ್ರವಾಸದ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ 8.80ರ ಸರಾಸರಿಯೊಂದಿಗೆ 4 ಓವರ್ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದರು. 20ನೇ ಓವರ್ ಬೌಲ್ ಮಾಡಿದ್ದ ಅವರು 22 ರನ್ ಬಿಟ್ಟುಕೊಟ್ಟಿದ್ದಾರೆ. ನೋಬಾಲ್, ವೈಡ್ ಬಾಲ್ ಎಸೆಯುವ ಮೂಲಕ ಇತರೆ ರನ್ ಬಿಟ್ಟುಕೊಟ್ಟರು. 2 ಸಿಕ್ಸರ್ ಮತ್ತು 1 ಬೌಂಡರಿ ಕೂಡ ಸೇರಿದೆ.
ಅರ್ಷದೀಪ್ ಭಾರತದ ಪರ ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದಾರೆ. ಜುಲೈ 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇದುವರೆಗೆ ಅವರು 32 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಬೌಲಿಂಗ್ನಲ್ಲಿ 18.77ರ ಸರಾಸರಿಯಲ್ಲಿ 49 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 8.53 ರ ಏಕನಾಮಿಯೊಂದಿಗೆ ರನ್‌ಗಳನ್ನು ನೀಡಿದ್ದಾರೆ. ಇದಲ್ಲದೇ ಏಕದಿನ ಮಾದರಿಯಲ್ಲಿ ಅವರ ವಿಕೆಟ್ ಖಾತೆ ಇನ್ನೂ ತೆರೆದಿಲ್ಲ. ಏಕದಿನ ಮಾದರಿಯಲ್ಲಿ ಅವರು 6.75 ರ ಏಕನಾಮಿಯೊಂದಿಗೆ ರನ್ ನೀಡಿದ್ದಾರೆ.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಭಾಗವಾಗುವ ಕನಸು ಕಂಡಿದ್ದ ಅರ್ಷದೀಪ್ ಸಿಂಗ್‌ಗೆ ಈ ಅಂಕಿ ಅಂಶಗಳು ಶಾಕ್ ನೀಡಿವೆ. ಅಲ್ಲದೆ ಡೆತ್ ಓವರ್ಗಳಲ್ಲಿ ಲೈನ್ ಹಾಗೂ ಲೆಂಥ್ ಮಿಸ್ ಮಾಡ್ತಾ ಇದ್ದು, ಆಯ್ಕೆದಾರರ ಚಿಂತೆಯನ್ನು ಹೆಚ್ಚಿಸಿದೆ. ಅರ್ಷದೀಪ್ ಈ ಪ್ರದರ್ಶನವನ್ನು ನೋಡಿದರೆ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದೆ.