Arshdeep Singh: ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿ ಟ್ರೋಫಿ ಎತ್ತಿಹಿಡಿದ ಭಾರತ ತಂಡಕ್ಕೆ ಸಣ್ಣದೊಂದು ಹಿನ್ನಡೆಯಾಗಿದೆ. ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾದ ವೇಗಿ ಅರ್ಷದೀಪ್ ಸಿಂಗ್ ಅವರಿಗೆ ಐಸಿಸಿ ದಂಡ ವಿಧಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ, ಅರ್ಷದೀಪ್ ಸಿಂಗ್ ಅವರು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅವರ ಪಂದ್ಯದ ಶುಲ್ಕದ ಶೇಕಡ 15ರಷ್ಟು ಮೊತ್ತದ ದಂಡ ವಿಧಿಸಿದೆ.

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನಾಯಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ತಂಡ ಇತಿಹಾಸ ನಿರ್ಮಿಸಿದ ಬೆನ್ನಲ್ಲೇ, ಈ ದಂಡದ ವಿಚಾರವು ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ ವೇಳೆ ಆಟಗಾರರು ಮೈದಾನದಲ್ಲಿ ತೋರಬೇಕಾದ ನಡವಳಿಕೆ ಮತ್ತು ಕ್ರೀಡಾಸ್ಫೂರ್ತಿಯ ಬಗ್ಗೆ ಐಸಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಅರ್ಷದೀಪ್ ಸಿಂಗ್ ಅವರ ನಡವಳಿಕೆ ಈ ನೀತಿ ಸಂಹಿತೆಗೆ ವಿರುದ್ಧವಾಗಿತ್ತು ಎಂದು ಮ್ಯಾಚ್ ರೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಅಂತಿಮವಾಗಿ ನಿಯಮಾವಳಿಗಳ ಪ್ರಕಾರ ಅರ್ಷದೀಪ್ ಅವರಿಗೆ ಈ ದಂಡವನ್ನು ವಿಧಿಸಲಾಗಿದೆ.
ಅರ್ಷದೀಪ್ ಸಿಂಗ್ ಅವರು ಐಸಿಸಿ ನೀತಿ ಸಂಹಿತೆಯ 'ಆರ್ಟಿಕಲ್ 2.9' (Article 2.9) ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಈ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದ ಅವಧಿಯಲ್ಲಿ ಯಾವುದೇ ಆಟಗಾರನು ಇನ್ನೊಬ್ಬ ಆಟಗಾರನಿಗೆ ಅಥವಾ ಆಟಗಾರನ ಬಳಿ ಅನುಚಿತ ವರ್ತನೆ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಸೇರಿದಂತೆ ಇನ್ನಿತರೆ ಉಪಕರಣಗಳನ್ನು ಎಸೆಯುವುದು ಗಂಭೀರ ಅಪರಾಧವಾಗಿದೆ.
ಫೈನಲ್ ಪಂದ್ಯದ ವೇಳೆ ಅರ್ಷದೀಪ್ ಸಿಂಗ್ ಅವರು ಎದುರಾಳಿ ಆಟಗಾರನ ಹತ್ತಿರಕ್ಕೆ ಚೆಂಡನ್ನು ಎಸೆದ ರೀತಿ, ನಿಯಮಬಾಹಿರವಾಗಿತ್ತು ಎಂದು ಮ್ಯಾಚ್ ರೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಪಂದ್ಯದ ಶುಲ್ಕದ 15% ದಂಡವನ್ನು ವಿಧಿಸಲಾಗಿದೆ. ದಂಡದ ಜೊತೆಗೆ, ಅರ್ಷದೀಪ್ ಸಿಂಗ್ ಅವರ ಶಿಸ್ತಿನ ದಾಖಲೆಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ಸೇರಿಸಲಾಗಿದೆ. 24 ತಿಂಗಳ ಅವಧಿಯಲ್ಲಿ ಆಟಗಾರರು ಇಂತಹ ತಪ್ಪುಗಳನ್ನು ಮರುಕಳಿಸಿದರೆ, ಅದು ಹೆಚ್ಚಿನ ಅಮಾನತು ಶಿಕ್ಷೆಗೆ ಕಾರಣವಾಗಬಹುದು.
ಅರ್ಷದೀಪ್ ಸಿಂಗ್ ಅವರ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳಲು ಕಾರಣವಾದ ಘಟನೆಯು ಪಂದ್ಯದ 11ನೇ ಓವರ್‌ನಲ್ಲಿ ನಡೆಯಿತು. ನ್ಯೂಜಿಲೆಂಡ್ ತಂಡವು ರನ್ ಗಳಿಸಲು ಪರದಾಡುತ್ತಿದ್ದ ಆ ಸಂದರ್ಭದಲ್ಲಿ ಅರ್ಷದೀಪ್ ಸಿಂಗ್ ಅವರು ಎಸೆದ ಥ್ರೋ, ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ದೇಹಕ್ಕೆ ಬಲವಾಗಿ ತಾಗಿತು. ಇದರಿಂದ ಕೋಪಗೊಂಡ ಮಿಚೆಲ್, ಅರ್ಷದೀಪ್ ಅವರ ನಡವಳಿಕೆಯನ್ನು ಪ್ರಶ್ನಿಸಿದರು.
ಕೂಡಲೇ ಇಬ್ಬರ ನಡುವೆ ಸಣ್ಣದಾಗಿ ಮಾತಿನ ಚಕಮಕಿ ನಡೆಯಿತು. ಇಬ್ಬರು ಆಟಗಾರರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗುವ ಮುನ್ನವೇ, ಅಂಪೈರ್‌ಗಳು ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಷ್ಟೇ ಅಲ್ಲದೆ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಸಹ ಮಧ್ಯಪ್ರವೇಶಿಸಿ, ಮಿಚೆಲ್ ಅವರ ಬಳಿ ಶಾತ ರೀರಿಯಲ್ಲಿ ಮಾತನಾಡಿ ಕ್ರೀಡಾಸ್ಪೂರ್ತಿ ಮೆರೆದರು.
ಪಂದ್ಯದ ನಂತರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫ್ರಿ, ಅರ್ಷದೀಪ್ ಸಿಂಗ್ ಅವರ ಥ್ರೋ ಅತಿಯಾದ ಆಕ್ರಮಣಕಾರಿಯಿಂದ ಕೂಡಿದೆ ಎಂದು ಪರಿಗಣಿಸಿದರು. ಇದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರರು ಕಾಯ್ದುಕೊಳ್ಳಬೇಕಾದ ನಿಯಮದ ಉಲ್ಲಂಘನೆ ಎಂದು ಸಾಬೀತಾದ ಕಾರಣ, ಐಸಿಸಿ ದಂಡ ವಿಧಿಸಿದೆ.
ಪಂದ್ಯದ ಮೈದಾನದಲ್ಲಿ ನಡೆದ ಈ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಆಟಗಾರರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಭಿನ್ನಾಭಿಪ್ರಾಯವನ್ನು ಬದಿಗಿಟ್ಟರು. ಅಲ್ಲದೆ, ಪಂದ್ಯ ಮುಕ್ತಾಯಗೊಂಡ ನಂತರ ಅರ್ಷದೀಪ್ ಸಿಂಗ್ ಅವರು ನೇರವಾಗಿ ಡ್ಯಾರಿಲ್ ಮಿಚೆಲ್ ಅವರ ಬಳಿಗೆ ತೆರಳಿ ಕ್ಷಮೆಯಾಚಿಸಿದರು. ಆಟಗಾರರ ಈ ಕ್ರೀಡಾಸ್ಫೂರ್ತಿಯು ಪಂದ್ಯದ ನಂತರ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಐಸಿಸಿ ತನ್ನ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಂಡಿದ್ದರೂ, ಆಟಗಾರರ ನಡುವಿನ ಈ ಪರಸ್ಪರ ಗೌರವವು ಕ್ರಿಕೆಟ್ ಎನ್ನುವುದು ಕೇವಲ ಸ್ಪರ್ಧೆಯಲ್ಲ, ಅದೊಂದು ಸ್ನೇಹದ ಕೊಂಡಿ ಎಂಬುದನ್ನು ಮತ್ತೆ ಸಾಬೀತುಪಡಿಸಿತು. ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘಟನೆ ಕುರಿತು ಮಾತನಾಡಿದ ಅರ್ಷದೀಪ್, ತಾವು ಡ್ಯಾರಿಲ್ ಮಿಚೆಲ್ ಅವರಲ್ಲಿ ಕ್ಷಮೆಯಾಚಿಸಿದ್ದನ್ನು ಸ್ಪಷ್ಟಪಡಿಸಿದರು.
"ನಾನು ಮಿಚೆಲ್ ಅವರ ಬಳಿ ಹೋಗಿ ಕ್ಷಮೆಯಾಚಿಸಿದೆ. ಚೆಂಡು ರಿವರ್ಸ್ ಸ್ವಿಂಗ್ ಆಗಿ ಮಿಚೆಲ್ ಅವರ ದೇಹಕ್ಕೆ ಬಲವಾಗಿ ತಾಕಿತು. ನಾನು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಲಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅವರಿಗೆ ತಿಳಿಸಿದೆ," ಎಂದು ಅರ್ಷದೀಪ್ ತಿಳಿಸಿದರು. ಒಟ್ಟಿನಲ್ಲಿ ಆಟಗಾರನೊಬ್ಬ ತನ್ನ ತಪ್ಪನ್ನು ಒಪ್ಪಿಕೊಂಡು, ಮೈದಾನದಲ್ಲಿ ಗೌರವಯುತವಾಗಿ ವರ್ತಿಸಿದ್ದು ಕ್ರಿಕೆಟ್‌ನಲ್ಲಿನ ಕ್ರೀಡಾ ಮನೋಭಾವವನ್ನು ಎತ್ತಿಹಿಡಿದಿದೆ.