ವಿಶ್ವಕಪ್‌ಗಾಗಿ ನವೀಕರಣಗೊಳ್ಳುತ್ತಿದೆ ಅರುಣ್ ಜೇಟ್ಲಿ ಸ್ಟೇಡಿಯಂ; ಯಾವ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ?
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಮುನ್ನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಅನ್ನು ಭರ್ಜರಿಯಾಗಿ ನವೀಕರಣಗೊಳಿಸಲಾಗುತ್ತಿದೆ.
ಈ ಸ್ಟೇಡಿಯಂ 2023ರ ಏಕದಿನ ವಿಶ್ವಕಪ್‌ನ ಐದು ಪಂದ್ಯಗಳನ್ನು ಆಯೋಜಿಸಲಿದೆ. ಈ ವರ್ಷದ ಆರಂಭದಲ್ಲಿ ಸ್ಟೇಡಿಯಂನ ಮೂಲಭೂತ ನೈರ್ಮಲ್ಯದ ಕೊರತೆಯಿಂದಾಗಿ, ವಿಶೇಷವಾಗಿ ವಾಶ್‌ರೂಮ್‌ಗಳಿಂದಾಗಿ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನವೀಕರಣ ಕೈಗೆತ್ತಿಕೊಂಡಿದೆ.

ಏಪ್ರಿಲ್‌ನಲ್ಲಿ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿ (ಬಿಸಿಸಿಐ) ಗ್ಯಾಪ್ ಮೌಲ್ಯಮಾಪನದ ನಂತರ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ಮೊಹಾಲಿ ಜೊತೆಗೆ ದೆಹಲಿಯ ಕ್ರೀಡಾಂಗಣವು ಹೆಚ್ಚಿನ ನವೀಕರಣದ ಅಗತ್ಯವಿರುವ ಐದು ಸ್ಟೇಡಿಯಂಗಳಲ್ಲಿ ಒಂದಾಗಿದೆ ಎಂದು ತಿಳಿಸಲಾಗಿತ್ತು.
ಗ್ಯಾಪ್‌ನ ಮೌಲ್ಯಮಾಪನವು ಕ್ರೀಡಾಂಗಣದ ನೈಜ ಸ್ಥಿತಿ ಮತ್ತು ಅದರ ಉದ್ದೇಶಿತ ಭವಿಷ್ಯದ ಸ್ಥಿತಿಯ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಗಗನಕ್ಕೇರಿದೆ ಮತ್ತು ಪ್ರಸಾರ ಹಕ್ಕುಗಳಿಂದ ಬಿಸಿಸಿಐಗೆ ಹಣದ ಹೊಳೆಯೇ ಹರಿದುಬರುತ್ತಿದೆ. ಆದರೂ, ಭಾರತದಲ್ಲಿನ ಹೆಚ್ಚಿನ ಕ್ರೀಡಾಂಗಣಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ, ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗುತ್ತಲೇ ಇವೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಜಂಟಿ ಕಾರ್ಯದರ್ಶಿ ರಾಜನ್ ಮಂಚಂಡ, ಐಸಿಸಿ ಪಂದ್ಯಾವಳಿ ಸಮಯದಲ್ಲಿ ಅಭಿಮಾನಿಗಳಿಗೆ ಉತ್ತಮ ಅನುಭವವನ್ನು ಒದಗಿಸುವ ಸಲುವಾಗಿ ಅರುಣ್ ಜೇಟ್ಲಿ ಕ್ರೀಡಾಂಗಣದ ಮೂಲಸೌಕರ್ಯವನ್ನು ಹೆಚ್ಚಿಸಲು ಡಿಡಿಸಿಎ ನವೀಕರಣ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

"ನಾವು ಮೂಲಭೂತ ಸೌಲಭ್ಯಗಳಲ್ಲಿ ಗಮನಾರ್ಹ ನವೀಕರಣ ಮಾಡುದ್ದೇವೆ, ಇದು ಪ್ರೇಕ್ಷಕರ ಆಸನಗಳನ್ನು ಬದಲಾಯಿಸುವುದರಿಂದ, ವಾಶ್‌ರೂಮ್‌ಗಳ ನವೀಕರಣ, ಗೋಡೆಗಳಿಗೆ ಬಣ್ಣ ಬಳಿಯುವುದು ಮತ್ತು ನಮ್ಮ ಟಿಕೆಟಿಂಗ್ ಸಾಫ್ಟ್‌ವೇರ್ ಕೂಡ ಬದಲಾಯಿಸಲಾಗುತ್ತದೆ," ಎಂದು ರಾಜನ್ ಮಂಚಂಡ ಹೇಳಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ 35,000 ಜನರಿಗೆ ಅವಕಾಶ ಕಲ್ಪಿಸುತ್ತದೆ. ಡಿಡಿಸಿಎ ಕಾರ್ಯದರ್ಶಿ ರಾಜನ್ ಮಂಚಂಡ ಪ್ರಕಾರ, ಕ್ರೀಡಾಂಗಣದ 15 ವರ್ಷಗಳ ಹಳೆಯ ಟರ್ನ್‌ಸ್ಟೈಲ್‌ಗಳನ್ನು ನವೀಕರಿಸುವುದರ ಜೊತೆಗೆ, ಸುಮಾರು 10,000 ಆಸನಗಳನ್ನು ಬದಲಾಯಿಸಲಾಗುತ್ತದೆ ಎಂದಿದ್ದಾರೆ.
"ನಾವು ನಮ್ಮ ಪ್ರೇಕ್ಷಕರಿಗೆ ಶುದ್ಧವಾದ ವಾಶ್‌ರೂಮ್, ಆರೋಗ್ಯಕರ ಆಹಾರ ಮತ್ತು ನೀರನ್ನು ನ್ಯಾಯಯುತ ಬೆಲೆಗೆ ನೀಡಬೇಕು. ಹೆಚ್ಚುವರಿಯಾಗಿ, ಹೌಸ್‌ಕೀಪಿಂಗ್ ತಂಡದ ಗಾತ್ರವನ್ನು ವಿಸ್ತರಿಸಲಾಗುವುದು. ಸೆಪ್ಟೆಂಬರ್ 15ರ ವೇಳೆಗೆ ಎಲ್ಲ ಕಾರ್ಯಗಳು ಪೂರ್ಣಗೊಳ್ಳಲಿವೆ," ಎಂದು ರಾಜನ್ ಮಂಚಂಡ ವಿವರಿಸಿದ್ದಾರೆ.
ವರದಿಗಳ ಪ್ರಕಾರ, ಬಿಸಿಸಿಐ ಮತ್ತು ಐಸಿಸಿ ನಿಯೋಗವು ಜುಲೈ ಮೂರನೇ ವಾರದಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನ ಪಿಚ್ ಮತ್ತು ಔಟ್‌ಫೀಲ್ಡ್‌ನ ಮೌಲ್ಯಮಾಪನವನ್ನು ಒಳಗೊಂಡಂತೆ ಸಮಗ್ರ ವೀಕ್ಷಣೆ ಮಾಡಲಿದೆ. ಮಾನದಂಡಗಳ ಪ್ರಕಾರ, ಸ್ಥಳವು ಅತ್ಯುತ್ತಮವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ.
ದೆಹಲಿ ಆತಿಥ್ಯ ವಹಿಸಲಿರುವ ಪಂದ್ಯಗಳು
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 7ರಂದು ಆತಿಥ್ಯ ವಹಿಸಲಿದೆ. ಆಗ ದಕ್ಷಿಣ ಆಫ್ರಿಕಾ ತಂಡವು ಕ್ವಾಲಿಫೈಯರ್ ತಂಡವನ್ನು ಎದುರಿಸಲಿದೆ. ನಂತರ, ಅಕ್ಟೋಬರ್ 11ರಂದು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದೊಡ್ಡ ಹಣಾಹಣಿ ನಡೆಸಲಿವೆ.
ಅಕ್ಟೋಬರ್ 14ರಂದು ಇದೇ ಸ್ಥಳದಲ್ಲಿ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಆಡಲಿದೆ. ಅಂತಿಮ ಎರಡು ಲೀಗ್ ಪಂದ್ಯಗಳನ್ನು ಅಕ್ಟೋಬರ್ 25ರಂದು ಆಸ್ಟ್ರೇಲಿಯಾ ತಂಡವು ಕ್ವಾಲಿಫೈಯರ್ 1 ತಂಡವನ್ನು ಮತ್ತು ನವೆಂಬರ್ 6ರಂದು ಬಾಂಗ್ಲಾದೇಶ ತಂಡವು ಕ್ವಾಲಿಫೈಯರ್ 2 ತಂಡವನ್ನು ಎದುರಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications