ಪರ್ತ್: ಬಹುನಿರೀಕ್ಷಿತ ಆಶಸ್ ಟೆಸ್ಟ್ ಸರಣಿ ಆರಂಭವಾಗಿದೆ. 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಜಯ ದಾಖಲಿಸಿದೆ. ಈ ಮೂಲಕ ಕೇವಲ 144.1 ಓವರ್‌ಗಳಲ್ಲಿ ಮೊದಲ ಟೆಸ್ಟ್ ಮುಕ್ತಾಯವಾಗಿದೆ. ಆತಿಥೇಯ ಆಸೀಸ್ 1-0 ಯಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಆಸೀಸ್ ಶನಿವಾರ ಆಟ ಶುರುವಾದಾಗ 9 ವಿಕೆಟ್‌ಗೆ 123 ರನ್‌ನೊಂದಿಗೆ ಆಟ ಮುಂದುವರೆಸಿ 132ಕ್ಕೆ ಆಲೌಟ್ ಆಗಿತ್ತು. 40 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ರನ್‌ಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಮೊದಲ ಇನಿಂಗ್ಸ್‌ನಂತೆ ಎರಡನೇ ಇನಿಂಗ್ಸ್‌ನಲ್ಲೂ ಇಂಗ್ಲೆಂಡ್ ತಂಡದ ಜಾಕ್ ಕ್ರಾಲಿ ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್‌ಗೆ ಬೆನ್ ಡಕೆಟ್ (28) ಹಾಗೂ ಓಲಿ ಪೋಪ್ (33) ಜೋಡಿ 65 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ಕಾಟ್ ಬೋಲ್ಯಾಂಡ್ ಸಫಲರಾದರು.

ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಖ್ಯಾತಿ ಪಡೆರುವ ಜೋ ರೂಟ್, ಎರಡನೇ ಇನಿಂಗ್ಸ್‌ನಲ್ಲೂ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಇವರ ಬಳಿಕ ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಸಹ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ಗಸ್ ಅಟ್ಕಿನ್ಸನ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ 15 ರನ್ ಕೊಂಚ ಆಸೀಸ್ ಬೌಲರ್‌ಗಳನ್ನು ಕಾಡಿದರು. ಅಂತಿಮವಾಗಿ ಇಂಗ್ಲೆಂಡ್ 34.4 ಓವರ್‌ಗಳಲ್ಲಿ 164 ರನ್ ಸಿಡಿಸಿ ಆಲೌಟ್ ಆಯಿತು.
ಆಸ್ಟ್ರೇಲಿಯಾದ ಪರ ಮಿಚೆಲ್ ಸ್ಟಾರ್ಕ್ ಬಿಗುವಿನ ದಾಳಿ ನಡೆಸಿ 3 ವಿಕೆಟ್ ಕಬಳಿಸಿದರು. ಬ್ರೆಂಡನ್ ಡಾಗೆಟ್ ಸಹ ಮೂರು ವಿಕೆಟ್ ತಮ್ಮದಾಗಿಸಿಕೊಂಡರು. ಆದರೆ ಸ್ಕಾಟ್ ಬೋಲ್ಯಾಂಡ್ 4 ವಿಕೆಟ್ ಕಬಳಿಸಿ ಮಿಂಚಿದರು.

205 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಆರಂಭ ಭರ್ಜರಿಯಾಗಿತ್ತು. ಮೊದಲ ವಿಕೆಟ್‌ಗೆ ಜೇಕ್ ವೆದರಾಲ್ಡ್ (23) ಹಾಗೂ ಟ್ರಾವಿಸ್ ಹೆಡ್ 11.3 ಓವರ್‌ಗಳಲ್ಲಿ 75 ರನ್ ಸೇರಿಸಿತು. ಆರಂಭಿಕ ಟ್ರಾವಿಸ್ ಹೆಡ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಆರ್ಭಟಿಸಿದರು. ಇವರು 83 ಎಸೆತಗಳಲ್ಲಿ 16 ಬೌಂಡರಿ, 4 ಸಿಕ್ಸರ್ ಸಹಾಯದಿಂದ 123 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಮಾರ್ನಸ್ ಲಂಬುಶೇನ್ ಅಜೇಯ 51 ಹಾಗೂ ಸ್ಟೀವನ್ ಸ್ಮಿತ್ ಅಜೇಯ 2 ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ಸಫಲರಾದರು.
ಇಂಗ್ಲೆಂಡ್ ಮೊದಲ ಇನಿಂಗ್ಸ್ 32.5 ಓವರ್‌ಗಳಲ್ಲಿ 172
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 45.2 ಓವರ್‌ಗಳಲ್ಲಿ 132
ಇಂಗ್ಲೆಂಡ್ ಎರಡನೇ ಇನಿಂಗ್ಸ್ 34.4 ಓವರ್‌ಗಳಲ್ಲಿ 164
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 28.2 ಓವರ್‌ಗಳಲ್ಲಿ 2 ವಿಕೆಟ್‌ಗೆ 205