ತವರಿನಲ್ಲೇ ನಡೆಯುತ್ತಿರುವ ಆಶಸ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಸೋಲು ಅನುಭವಿಸಿದ್ದು ಐದು ಪಂದ್ಯಗಳ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ 0-2 ಅಂತರದಿಂದ ಹಿನ್ನಡೆ ಅನುಭವಿಸಿದೆ. ಈ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕಿದ್ದರೆ ಉಳಿದ ಊರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಬೇಕಾದ ಒತ್ತಡದಲ್ಲಿದೆ ಬೆನ್ ಸ್ಟೋಕ್ಸ್ ತಂಡ. ಈ ಸಂದರ್ಭದಲ್ಲಿ ಸರಭಿಯ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಸ್ಕ್ವಾಡ್ ಪ್ರಕಟಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಆಶಸ್ ಟೆಸ್ಟ್ ಪಂದ್ಯಗಳಿಗೆ ಹೆಸರಿಸಲಾದ ತಂಡದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಎರಡನೇ ಟೆಸ್ಟ್‌ಗೆ ಮೊಯಿನ್ ಅಲಿ ಗಾಯಗೊಂಡಿದ್ದ ಕಾರಣ ಕವರ್ ಆಟಗಾರನಾಗಿ ಹೆಸರಿಸಲಾಗಿದ್ದ ರೆಹಾನ್ ಅಹ್ಮದ್ ಮತ್ತು ಮ್ಯಾಥ್ಯೂ ಪಾಟ್ಸ್ ಅವರನ್ನು 15 ಸದಸ್ಯರ ತಂಡದಿಂದ ಕೈಬಿಡಲಾಗಿದೆ. ಉಳಿದಂತೆ ಜೇಮ್ಸ್ ಆಂಡರ್ಸನ್ ಮತ್ತು ಮೊಯಿನ್ ಅಲಿ ಸೇರಿದಂತೆ ಪ್ರಮುಖ ಆಟಗಾರರು ಆಸ್ಟ್ರೇಲಿಯಾವನ್ನು ಲೀಡ್ಸ್‌ನಲ್ಲಿ ಎದುರಿಸಲಿರುವ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಅಲ್‌ರೌಂಡರ್ ಮೊಯಿನ್ ಅಲಿ ಅವರಿಗೆ ಬದಲಿ ಆಟಗಾರನಾಗಿ ಸ್ಕ್ವಾಡ್‌ನಲ್ಲಿ ಸೇರಿಕೊಂಡಿದ್ದ ರೆಹಾನ್ ಅವರನ್ನು ಕೈಬಿಟ್ಟಿರುವ ಕಾರಣ ಅಲಿ ಮೂರನೇ ಟೆಸ್ಟ್ ಆಡುವ ಸಾಧ್ಯತೆ ದಟ್ಟವಾಗಿದೆ. ಮೊಯಿನ್ ಚೇತರಿಸಿಕೊಳ್ಳುತ್ತಿದ್ದು ಇಂಗ್ಲೆಂಡ್ 3 ನೇ ಟೆಸ್ಟ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಈ ಹಿಂದೆ ವರದಿಯಾಗಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಯೀನ್ ಅಲಿ ಕೈ ಬೆರಳುಗಳಿಗೆ ಗಾಯವಾಗಿದ್ದ ಕಾರಣ ಎರಡನೇ ಟೆಸ್ಟ್ ಪಂದ್ಯದಿಂದ ಅಲಿ ಹೊರಗುಳಿದಿದ್ದರು.
ಆಶಸ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಪ್ರವಾಸಿ ಆಸ್ಟ್ರೇಲಿಯಾ ಅಮೋಘ ಗೆಲುವು ಸಾಧಿಸಿದ್ದು ಐದು ಪಂದ್ಯಗಳ ಈ ಸರಣಿಯಲ್ಲಿ 2-0 ಅಂತರದಿಂದ ಭರ್ಜರಿ ಮುನ್ನಡೆ ಸಾಧಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರಂಭದ ದಿನದಿಂದಲೂ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಕೊನೆಯ ದಿನದವರೆಗೂ ಈ ಬಿಗಿಹಿಡಿತವನ್ನು ಮುಂದುವರಿಸಿತ್ತು. ಆದರೆ ಅಂತಿಮ ದಿನದಾಟದಲ್ಲಿ ಬೆನ್ ಸ್ಟೋಕ್ಸ್ ಆಡಿದ ಅಮೋಘ ಆಟ ಆಸಿಸ್ ತಂಡಕೆ ಸೋಲಿನ ಆತಂಕವನ್ನು ಸೃಷ್ಟಿಸಿದ್ದು ಸುಳ್ಳಲ್ಲ.
ಆದರೆ ಬೆನ್ ಸ್ಟೋಕ್ಸ್ ವಿಕೆಟ್ ಪಡೆದ ಬಳಿಕ ಆಸಿಸ್ ತಂಡ ಮೇಲುಗೈ ಸಾಧಿಸಿ ಗೆಲುವು ಪಡೆದುಕೊಂಡಿದೆ. ಏಕಾಂಗಿಯಾಗಿ ಬ್ಯಾಟ್ ಬೀಸಿದ ನಾಯಕ ಬೆನ್ ಸ್ಟೋಕ್ಸ್ ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು. 214 ಎಸೆತಗಳನ್ನು ಎದುರಿಸಿದ ಬೆನ್ ಸ್ಟೋಕ್ಸ್ 155 ರನ್‌ಗಳಿಸಿದ್ದ ಸಂದರ್ಭದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಇಂಗ್ಲೆಂಡ್ ಗೆಲುವಿನ ಭರವಸೆ ಅಂತ್ಯವಾಯಿತು. ಅಗ್ರಕ್ರಮಾಂಕದ ಪ್ರಮುಖ ಆಟಗಾರರು ಎರಡನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಇಲ್ಲಿ ಇಂಗ್ಲೆಂಡ್ ಪಡೆಗೆ ಭಾರೀ ಆಘಾತವನ್ನುಂಟು ಮಾಡಿತ್ತು.
ಎರಡನೇ ಇನ್ನಿಂಗ್ಸ್ ಇಂಗ್ಲೆಂಡ್ ತಂಡ 327 ರನ್‌ಗಳನ್ನು ಗಳಿಸಿ ಆಲೌಟ್ ಆಗುವ ಮೂಲಕ 43 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಇನ್ನು ಈ ಗೆಲುವು ಆಸ್ಟ್ರೇಲಿಯಾ ತಂಡಕ್ಕೆ ಈ ಸರಣಿಯಲ್ಲಿ ಸತತ ಎರಡನೇ ಗೆಲುವಿವಾಗಿದ್ದು ಐದು ಪಂದ್ಯಗಳ ಈ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ ಸುದೀರ್ಘ ಕಾಲದ ಬಳಿಕ ಇಂಗ್ಲೆಂಡ್ ನೆಲದಲ್ಲಿ ಆಶಸ್ ಗೆಲ್ಲುವ ಸನಿಹದಲ್ಲಿದೆ.
3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಸ್ಕ್ವಾಡ್: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಮೊಯಿನ್ ಅಲಿ, ಆಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.