ENG vs AUS Ashes 2023: ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು
ಮಂಗಳವಾರ, ಜೂನ್ 20ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ರೋಚಕ 2 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.
ಮೊದಲ ಪಂದ್ಯದ 5ನೇ ದಿನದಾಟದ ಅರ್ಧದಿನ ಮಳೆಗಾಹುತಿಯಾದರೂ, ನಂತರ ನಡೆದ ರೋಚಕ ಹಣಾಹಣಿಯಲ್ಲಿ ಇಂಗ್ಲೆಂಡ್ ನೀಡಿದ 281 ರನ್‌ಗಳ ಗುರಿಯನ್ನು 8 ವಿಕೆಟ್ ಕಳೆದುಕೊಂಡು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಐದು ಪಂದ್ಯಗಳ ಆಶಸ್ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 1-0 ಅಂತರದ ಮುನ್ನಡೆ ಸಾಧಿಸಿದೆ.

ನಾಲ್ಕನೇ ದಿನದಾಟದಂತ್ಯಕ್ಕೆ 107 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ಕೊನೆಯ ದಿನದಾಟ ಆರಂಭಿಸಿತು. ಬ್ಯಾಟಿಂಗ್ ಉಳಿಸಿಕೊಂಡಿದ್ದ ಉಸ್ಮಾನ್ ಖವಾಜಾ ಅಜೇಯ 197 ಎಸೆತಗಳಲ್ಲಿ 7 ಬೌಂಡರಿ ಸಮೇತ 65 ರನ್ ಗಳಿಸಿ ಔಟಾದರೆ, ಸ್ಕಾಟ್ ಬೋಲ್ಯಾಂಡ್ 40 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 16 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕ್ಯಾಮೆರಾನ್ ಗ್ರೀನ್ 66 ಎಸೆತಗಳಲ್ಲಿ 28 ರನ್ ಗಳಿಸಿದರೆ, ಅಲೆಕ್ಸ್ ಕ್ಯಾರಿ 50 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
227 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ, ಅಂತಿಮವಾಗಿ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ 9ನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ನೀಡಿದರು.
ಪ್ಯಾಟ್ ಕಮ್ಮಿನ್ಸ್ 73 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಔಟಾಗದೆ 44 ರನ್ ಗಳಿಸಿದರೆ, ಇವರಿಗೆ ಸಾಥ್ ನೀಡಿದ ಬಾಲಂಗೋಚಿ ನಾಥನ್ ಲಿಯಾನ್ 28 ಎಸೆತಗಳಲ್ಲಿ 16 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲು ಆಸ್ಟ್ರೇಲಿಯಾದ 2ನೇ ಇನ್ನಿಂಗ್ಸ್‌ನ ನಾಲ್ಕನೇ ದಿನದಾಟದಲ್ಲಿ ಡೇವಿಡ್ ವಾರ್ನರ್ 36 ರನ್, ಮಾರ್ನಸ್ ಲ್ಯಾಬುಸ್ಚಾಗ್ನೆ 13 ರನ್ ಮತ್ತು ಸ್ಟೀವ್ ಸ್ಮಿತ್ 6 ರನ್ ಗಳಿಸಿ ಔಟಾಗಿದ್ದರು. ಈ ಗೆಲುವಿನ ಶ್ರೇಯ ತಂಡವನ್ನು ದಡ ಸೇರಿಸಿದ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಸಲ್ಲಬೇಕು.
ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್ 21 ಓವರ್‌ಗಳಲ್ಲಿ 64 ರನ್ ನೀಡಿ 3 ವಿಕೆಟ್ ಪಡೆದರೆ, ಒಲ್ಲಿ ರಾಬಿನ್‌ಸನ್ 18.3 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮೊಯಿನ್ ಅಲಿ, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ದಿನದಂದು ಟಾಸ್ ಗೆದ್ದ ಇಂಗ್ಲೆಂಡ್ ತಂಡ 78 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ವೇಳೆ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಭರ್ಜರಿ ಶತಕ ಬಾರಿಸಿದ್ದರು.
ಪ್ರವಾಸಿ ತಂಡದ ಪರ ನಾಥನ್ ಲಿಯಾನ್ ಅತ್ಯುತ್ತಮ ಬೌಲರ್ ಎನಿಸಿದ್ದು, ಅವರು 149 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಪಡೆದರು. ಸ್ಕಾಟ್ ಬೋಲ್ಯಾಂಡ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಆ ಬಳಿಕ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 116.1 ಓವರ್‌ಗಳಲ್ಲಿ 386 ರನ್‌ಗಳಿಗೆ ಸರ್ವಪತನ ಕಂಡಿತು. ಆಸೀಸ್ ತಂಡದ ಪರ ಉಸ್ಮಾನ್ ಖವಾಜಾ 141 ರನ್‌ಗಳ ಅಮೋಘ ಶತಕ ಬಾರಿಸಿ ತಂಡಕ್ಕೆ ನೆರವಾದರು.
ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್ 23 ಓವರ್‌ಗಳಲ್ಲಿ 68 ರನ್ ನೀಡಿ 3 ವಿಕೆಟ್ ಪಡೆದರೆ, ಒಲ್ಲಇ ರಾಬಿನ್‌ಸನ್ 3 ವಿಕೆಟ್, ಮೊಯಿನ್ ಅಲಿ 2 ವಿಕೆಟ್ ಮತ್ತು ಬೆನ್ ಸ್ಟೋಕ್ಸ್ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications