ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಮಳೆ ಅಡ್ಡಿಯಾಗಿದ್ದು ಆಸ್ಟ್ರೇಲಿಯಾ ಆರಂಭಿಕರ ಓಟಕ್ಕೆ ಅಡ್ಡಿಯಾಗಿದೆ. ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತದ ಗುರಿಯನ್ನು ಆಸ್ಟ್ರೇಲಿಯಾ ದಿಟ್ಟವಾಗಿ ಬೆನ್ನಟ್ಟಲು ಆರಂಭಿಸಿದ್ದು ಕೊನೆಯ ದಿನದಾಟ ಭಾರೀ ಕುತೂಹಲ ಮೂಡಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ನೀಡಿದ 384 ರನ್‌ಗಳನ್ನು ಬೆನ್ನಟ್ಟಿರುವ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಆಸಿಸ್ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜ ಜೋಡಿ ಸದ್ಯ 135 ರನ್‌ಗಳ ಜೊತೆಯಾಟ ನೀಡಿದ್ದು ಆಸ್ಟ್ರೇಲಿಯಾ ತಂಡದ ಗೆಲುವಿನ ವಿಶ್ವಾಸ ಮೂಡಿಸಿದ್ದಾರೆ. ನಾಲ್ಕನೇ ಮಳೆ ಅಡ್ಡಿಯುಂಟು ಮಾಡಿದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡ 249 ರನ್‌ಗಳ ಹಿನ್ನಡೆಯಲ್ಲಿದೆ.

ಆಸ್ಟ್ರೇಲಿಯಾದ ಆರಂಭಿಕ ಜೋಡಿಯಾದ ವಾರ್ನರ್ ಹಾಗೂ ಖವಾಜ ಜೊತೆಯಾಗಿ ಈ ಸರಣಿಯಲ್ಲಿ ಮೊದಲ ಬಾರಿಗೆ ಪರಿಣಾಮಕಾರಿ ಇನ್ನಿಂಗ್ಸ್ ಆಡುತ್ತಿದ್ದು ಆಸ್ಟ್ರೇಲಿಯಾದ ಐತಿಹಾಸಿಕ ಗೆಲುವಿನ ಮೇಲೆ ಚಿತ್ತ ನೆಟ್ಟಿದ್ದಾರೆ. ಡೇವಿಡ್ ವಾರ್ನರ್ ಅಜೇಯ 58 ರನ್‌ಗಳನ್ನು ಗಳಿಸಿದ್ದರೆ ಉಸ್ಮಾನ್ ಖವಾಜ 69 ರನ್‌ಗಳನ್ನು ಗಳಿಸಿ ಕೊನೆಯ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಭಾರೀ ಮೇಲುಗೈ ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 395 ರನ್‌ಗಳನ್ನು ಗಳಿಸಿರುವ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾಗೆ ಬೃಹತ್ ಗುರಿಯನ್ನು ನೀಡಿದೆ. ಈ ಬೃಹತ್ ಗುರಿಯನ್ನು ಬೆನ್ನಟ್ಟುವತ್ತ ಚಿತ್ತ ನೆಟ್ಟಿದೆ ಆಸ್ಟ್ರೇಲಿಯಾ.
ಮೊದಲ ಇನ್ನಿಂಗ್ಸ್‌ನಲ್ಲಿ 12 ರನ್‌ಗಳ ಹಿನ್ನಡೆ ಅನುಭವಿಸಿದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಜಾಕ್ ಕ್ರಾವ್ಲೆ, ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಭರ್ಜರಿ ಅರ್ಧ ಶತಕಗಳ ಕೊಡುಗೆ ನೀಡುವ ಮೂಲಕ ಮಿಂಚಿದ್ದಾರೆ. ಜೋ ರೂಟ್ ಈ ಪಂದ್ಯದಲ್ಲಿ 91 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದು ಕ್ರಾವ್ಲೆ 73 ರನ್‌ಗಳನ್ನು ಗಳಿಸಿದ್ದರೆ ಜಾನಿ ಬೈರ್‌ಸ್ಟೊವ್ 78 ರನ್‌ಗಳನ್ನು ಗಳಿಸಿದರು. ಇದೀಗ ಆಸ್ಟ್ರೇಲಿಯಾ ತಂಡ ಈ ಮೊತ್ತವನ್ನು ಬೆನ್ನಟ್ಟುವ ಸವಾಲು ಪಡೆದುಕೊಂಡಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್ ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಟಾಡ್ ಮರ್ಫಿ
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೊನಾಥನ್ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.