ಆಶಸ್ ಟೆಸ್ಟ್ ಸರಣಿಯ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯ ಜುಲೈ 27ರಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದಿದ್ದು ಆರಂಭದಲ್ಲಿ ಬೌಲಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಪ್ರವಾಸಿ ಇಂಗ್ಲೆಂಡ್ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಈ ಪಂದ್ಯ ನಡೆಯುತ್ತಿದ್ದು ಎರಡು ತಂಡಗಳು ಕೂಡ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆಯಲ್ಲಿದ್ದು ಎರಡು ದಶಕದ ಬಳಿಕ ಇಂಗ್ಲೆಂಡ್ ನೆಲದಲ್ಲಿ ಆಶಸ್ ಗೆಲ್ಲುವ ಕನಸು ಕಾಣುತ್ತಿದ್ದರೆ ಇಂಗ್ಲೆಂಡ್ ತಂಡ ಸರಣಿ ಸಮಬಲಗೊಳಿಸುವ ಪ್ರಯತ್ನದಲ್ಲಿದೆ. ಹೀಗಾಗಿ ಈ ಪಂದ್ಯ ಕುತೂಹಲ ಕೆರಳಿಸಿದೆ.

ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು ಸ್ಪಿನ್ನರ್ ಟಾಡ್ ಮರ್ಫಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ತಂಡ ಯಾವುದೇ ಬದಲಾವನೆ ಮಾಡಿಕೊಳ್ಳದೆ ಕಣಕ್ಕಿಳಿದಿದ್ದು ನಾಲ್ಕನೇ ಪಂದ್ಯದಲ್ಲಿ ಆಡಿದ ಸಂಪೂರ್ಣ ತಂಡದೊಂದಿಗೆ ಈ ಪಂದ್ಯವನ್ನಾಡುತ್ತಿದೆ.
Live ಸ್ಕೋರ್ ಹೀಗಿದೆ
ಸರಣಿಯ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡ ಬಳಿಕ ಇಂಗ್ಲೆಂಡ್ ನಂತರದ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದ ಬಳಿಕ ನಾಲ್ಕನೇ ಪಂದ್ಯದಲ್ಲಿಯೂ ಬಹುತೇಕ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಮಳೆ ಸರಣಿ ಸಮಬಲಗೊಳಿಸುವ ಅವಕಾಶ ತಪ್ಪಿಸಿತ್ತು. ಆ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತ್ತು. ಇದು ಆತಿಥೆಯ ಇಂಗ್ಲೆಂಡ್ ತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ.
ಸಾಂಪ್ರದಾಯಿಕವಾಗಿ ಇಂಗ್ಲೆಂಡ್‌ನ ಓವಲ್ ಕ್ರೀಡಾಂಗಣ ಅಲ್ಲಿನ ಅತ್ಯುತ್ತಮ ಬ್ಯಾಟಿಂಗ್ ಪಿಚ್‌ಗಳಲ್ಲಿ ಒಂದು. ಇದು ಇಂಗ್ಲೆಂಡ್ ತಂಡಕ್ಕೆ ತಮ್ಮ ಅಲ್ಟ್ರಾ-ಆಕ್ರಮಣಕಾರಿ ಆಟವನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಮೈದಾನದಲ್ಲಿ ಆಡಿದ 106 ಟೆಸ್ಟ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 39 ಪಂದ್ಯಗಳಲ್ಲಿ ಗೆದ್ದ ಉದಾಹರಣೆಯಿದ್ದು ಮೇಲುಗೈ ಸಾಧಿಸಿದೆ.
ಹವಾಮಾನ: ಇನ್ನು ಈ ಪಂದ್ಯಕ್ಕೂ ಮಳೆಯ ಆತಂಕ ಇದ್ದೇ ಇದೆ. ಅದರಲ್ಲೂ ಮೊದಲನೇ ದಿನ ಮೂರನೇ ದಿನ ಹಾಗೂ ಐದನೇ ದಿನ ಭಾರೀ ಮಳೆಯಾಗುವ ಮುನ್ಸೂಚನೆಯಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್ ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಟಾಡ್ ಮರ್ಫಿ
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೊನಾಥನ್ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.