ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಭರ್ಜರಿ ಬ್ಯಾಟಿಂಗ್‌ನ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಪಂದ್ಯ ಕುತೂಹಲ ಹೆಚ್ಚಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮೊದಲ ಸೆಶನ್‌ನಲ್ಲಿ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿದ ಇಂಗ್ಲೆಂಡ್ ಬಳಿಕ ಬ್ಯಾಟಿಂಗ್‌ನಲ್ಲಿಯೂ ಗಮನಸೆಳೆದಿದೆ.
ಈ ಪಂದ್ಯದಲ್ಲಿ ಮೊದಲ ದಿನದಾಟ ಅಂತ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್ ಕಲೆದುಕೊಂಡು 339 ರನ್‌ಗಳನ್ನು ಗಳಿಸಿತ್ತು. ಸ್ಟೀವ್ ಸ್ಮಿತ್ 85 ರನ್ ಮತ್ತು ಅಲೆಕ್ಸ್ ಕ್ಯಾರಿ 11 ರನ್‌ಗಳಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದರು. ಈ ಪೈಕಿ ಅಲೆಲ್ಸ್ ಕ್ಯಾರಿ ಇಂದು ಕೇವಲ 11 ರನ್‌ಗಳನ್ನು ಮಾತ್ರವೇ ಸೇರಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾದ ಕುಸಿತ ಆರಂಭವಾಯಿತು. ಸ್ಟೀವ್ ಸ್ಮಿತ್ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ್ದು ಟೆಸ್ಟ್ ಮಾದರಿಯಲ್ಲಿ ತಮ್ಮ 32ನೇ ಶತಕವನ್ನು ಪೂರ್ತಿಗೊಳಿಸಿದರು. 184 ಎಸೆತಗಳನ್ನು ಎದುರಿಸಿದ ಅವರು 110 ರನ್‌ಗಳಿಸಿ ಔಟಾದರು.

ಉಳಿದಂತೆ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತ್ರವೇ 22 ರನ್‌ಗಳಿಸಿ ಕೆಲ ಕಾಲ ಕ್ರೀಸ್‌ನಲ್ಲಿ ಇಂಗ್ಲೆಂಡ್ ವೇಗಿಗಳನ್ನು ಕಾಡಿದರು. ಹೀಗಾಗಿ ಆಸ್ಟ್ರೇಲಿಯಾ ತಂಡ 416 ರನ್‌ಗಳನ್ನು ಗಳಿಸಿ ಮೊದಲ ಇನ್ನಿಂಗ್ಸ್‌ನ ಆಟ ವನ್ನು ಅಂತ್ಯಗೊಳಿಸಿತು. ಇಂಗ್ಲೆಂಡ್ ಪರವಾಗಿ ಜೋಶ್ ಟಂಗ್ ಹಾಗೂ ರಾಬಿನ್ಸನ್ ತಲಾ ಮೂರು ವಿಕೆಟ್ ಪಡೆದರೆ ಜೋ ರೂಟ್ ಎರಡು ವಿಕೆಟ್ ಸಂಪಾದಿಸಿದರು. ಆಂಡರ್ಸನ್ ಹಾಘೂ ಬ್ರಾಡ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‌ಗೆ ಭರ್ಜರಿ ಆರಂಭ ದೊರೆಯಿತು. ಜಾಕ್ ಕ್ರಾವ್ಲೆ ಹಾಗೂ ಬೆನ್ ಡಕೆಟ್ 91 ರನ್‌ಗಳ ಜೊತೆಯಾಟ ನೀಡಿದರು. ಕ್ರಾವ್ಲೆ 48 ರನ್‌ಗಳಿಸಿ ಔಟಾಗಿದ್ದು ನಂತರ ಡಕೆಟ್ ಹಘೂ ಒಲಿ ಪೋಪ್ ಕೂಡ ಉತ್ತಮ ಜೊತೆಯಾಟದಲ್ಲಿ ಭಾಗುಯಾದರು. ಒಲಿ ಪೋಪ್ 42 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ 98 ರನ್‌ಗಳಿಸಿದ್ದ ಬೆನ್ ಡಕೆಟ್ ಶತಕದ ಅಂಚಿನಲ್ಲಿ ಔಟಾದರು. ನಂತರ ಜೋ ರೂಟ್ ಅವರನ್ನು 10 ರನ್‌ಗಳಿಸಿದ್ದಾಗ ಔಟ್ ಮಾಡುವ ಮೂಲಕ ಅಲ್ಪ ಮೊತ್ತಕ್ಕೆ ವಿಕೆಟ್ ಪಡೆಯುವಲ್ಲಿ ಇಂಗ್ಲೆಂಡ್ ಯಶಸ್ವಿಯಾಯಿತು.
ಇನ್ನು ಹ್ಯಾರು ಬ್ರೂಕ್ ಹಾಗೂ ಬೆನ್ ಸ್ಟೋಕ್ಸ್ ಕ್ರೀಸ್‌ನಲ್ಲಿದ್ದು ಮೂರನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ. ಬ್ರೂಕ್ 45 ರನ್‌ಗಳನ್ನು ಗಳಿಸಿದ್ದರೆ ಸ್ಟೋಕ್ಸ್ 17 ರನ್‌ಗಳಿಸಿದ್ದಾರೆ. ಎರಡನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ 278 ರನ್‌ಗಳನ್ನು ಗಳಿಸಿದ್ದು 4 ವಿಕೆಟ್ ಕಳೆದುಕೊಂಡಿದೆ. ಇನ್ನು ಕೂಡ 138 ರನ್‌ಗಳ ಹಿನ್ನಡೆಯಲ್ಲಿದೆ ಸ್ಟೋಕ್ಸ್ ಪಡೆ.
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್