ಮಂಗಳವಾರ, ಜೂನ್ 16ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಶಸ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಮಂಗಳವಾರ ಕೊನೆಯ ದಿನದ ಆಟವಾಗಿದೆ.
ಇದೇ ವೇಳೆ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿದ್ದಾರೆ. ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
ಬಲಗೈ ಸ್ಟಾರ್ ಬ್ಯಾಟರ್ ಜೋ ರೂಟ್ 118 ರನ್ ಗಳಿಸಿ, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 30ನೇ ಟೆಸ್ಟ್ ಶತಕ ಬಾರಿಸಿದರು. ಇದು ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ರನ್ ಗಳಿಸಲು ನೆರವಾಯಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿ, ಆತಿಥೇಯ ತಂಡವು ಸ್ಕೋರ್ ಬೋರ್ಡ್‌ನಲ್ಲಿ ಗೌರವಾನ್ವಿತ ಮೊತ್ತ ಕಲೆಹಾಕಲು ಸಹಾಯವಾಯಿತು.

ಜೋ ರೂಟ್ ಅವರು ಸೋಮವಾರ ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾದ ನಂತರ ವಿಶಿಷ್ಟವಾದ ಟೆಸ್ಟ್ ಸಾಧನೆಯನ್ನು ಮಾಡಿದರು. ಈ ಮೂಲಕ ಜೋ ರೂಟ್ ಅವರು ಭಾರತದ ಲೆಜೆಂಡ್‌ಗಳಾದ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದರು.
ಆಸ್ಟ್ರೇಲಿಯಾದ ಬಲಗೈ ಸ್ಪಿನ್ನರ್ ನಾಥನ್ ಲಿಯಾನ್ ಅವರ ಎಸೆತದಲ್ಲಿ ಜೋ ರೂಟ್ ಕ್ರೀಸ್‌ನಲ್ಲಿ ತಡಕಾಡಿದರು. ಆಗ ಇದನ್ನು ಅರಿತ ನಾಥನ್ ಲಿಯಾನ್ ಅವರು ಇಂಗ್ಲೆಂಡ್‌ನ ಬ್ಯಾಟರ್‌ನನ್ನು ಮೋಸಗೊಳಿಸಲು ಯಶಸ್ವಿಯಾದರು.
ಆಸ್ಟ್ರೇಲಿಯಾ ತಂಡದ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಆರಾಮವಾಗಿ ಸ್ಟಂಪ್‌ನ ಹಿಂದೆ ಚೆಂಡನ್ನು ಪಡೆದು ಬೇಲ್ಸ್‌ಗಳನ್ನು ಹಾರಿಸಿದರು. ಇದರಿಂದ ಜೋ ರೂಟ್ ಪೆವಿಲಿಯನ್ ಕಡೆ ಮುಖ ಮಾಡಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಸ್ಟಂಪ್ ಔಟ್ ಆಗಿದ್ದು ಇದೇ ಮೊದಲು. ಈ ರೀತಿ ಸ್ಟಂಪ್ ಔಟ್ ಆಗುವ ಮೊದಲು ಟೆಸ್ಟ್ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿರುವುದು ದಾಖಲೆಯಾಗಿದೆ. ಟೆಸ್ಟ್ ವೃತ್ತಿಜೀವನದ 11,168 ರನ್ ಗಳಿಸಿದ ನಂತರ ಜೋ ರೂಟ್ ಸ್ಟಂಪ್ ಔಟ್ ಆದರು.
ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ಸ್ಟಂಪ್ ಔಟ್ ಆಗುವ ಮೊದಲು 11,414 ರನ್ ಗಳಿಸುವ ಮೂಲಕ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಸ್ಟಂಪ್ ಔಟ್ ಆಗುವ ಮೊದಲು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 8,800 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಲೆಜೆಂಡ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಮವಾಗಿ 8,195 ಮತ್ತು 7,419 ರನ್ ಗಳಿಸಿ ಮೊದಲ ಬಾರಿಗೆ ಸ್ಟಂಪ್ ಔಟ್ ಆಗಿದ್ದರು.
32 ವರ್ಷದ ಜೋ ರೂಟ್ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕದೊಂದಿಗೆ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಮತ್ತು ಇಂಗ್ಲೆಂಡ್‌ನ ಮಾಜಿ ಸಹ ಆಟಗಾರ ಅಲಸ್ಟೈರ್ ಕುಕ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಜೋ ರೂಟ್ ತಮ್ಮ ವೃತ್ತಿಜೀವನದ 30ನೇ ಟೆಸ್ಟ್ ಶತಕವನ್ನು ಸಿಡಿಸುತ್ತಿದ್ದಂತೆಯೇ, ಆಸೀಸ್ ಮಾಜಿ ದಿಗ್ಗಜ ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ಸಾಧನೆಯನ್ನು ಮೀರಿಸಿದರು.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳ ನಂತರ, ಜೋ ರೂಟ್ ಅವರು ಇಂಗ್ಲೆಂಡ್ ತಂಡದ ಪರ ವೇಗವಾಗಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ ಇಂಗ್ಲಿಷ್ ಆಟಗಾರನಾದರು. ಮಾಜಿ ನಾಯಕ ಅಲಸ್ಟೈರ್ ಕುಕ್ 239 ಇನ್ನಿಂಗ್ಸ್‌ಗಳಲ್ಲಿ 30ನೇ ಶತಕವನ್ನು ಗಳಿಸಿದ್ದರೆ, ಜೋ ರೂಟ್ 233ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.