ಆಶಸ್‌ಗೆ ನಾನು ರೆಡಿ ಎಂದ RCB ವೇಗಿ ಜೋಶ್ ಹೇಜಲ್‌ವುಡ್
ಗಾಯದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಿಂದ ಹೊರಗುಳಿದಿದ್ದ ಜೋಶ್ ಹೇಜಲ್‌ವುಡ್ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಈ ಬಗ್ಗೆ ಸ್ವತಃ ಹೇಜಲ್‌ವುಡ್ ಮಾಹಿತಿ ನೀಡಿದ್ದು ಮೊದಲ ಟೆಸ್ಟ್ ಪಂದ್ಯಕ್ಕೆ ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಎಂದು ಘೋಷಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಮಿಂಚಲು ಆಸಿಸ್ ವೇಗಿ ಸರ್ವಸನ್ನಧವಾಗಿದ್ದಾರೆ.
ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಗಿ ಗುರಿತಿಸಿಕೊಂಡಿದ್ದಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ವೇಗದ ಬೌಲರ್ ಸಾಕಷ್ಟು ಸವಾಲನ್ನು ಎದುರಿಸಿದ್ದಾರೆ. ಹಲವು ಗಾಯದ ಸಮಸ್ಯೆಗಳಿಗೆ ತುತ್ತಾಗಿರುವ ಅವರು ಕಳೆದ ಎರಡು ವರ್ಷಗಳಲ್ಲಿ ಕೇವಲ ನಾಲ್ಕು ಟೆಸ್ಟ್‌ಗಳನ್ನು ಆಡಿದ್ದಾರೆ. ಅಲ್ಲದೆ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿಯೂ ಅಡುವ ಅವಕಾಶ ಕಳೆದುಕೊಂಡಿದ್ದರು.

ಆದರೆ ಈ ವರ್ಷದ ಆಶಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ತಾನು ಫಿಟ್ ಆಗಿದ್ದೇನೆ ಎಂದಿರುವ ಅವರು ಈ ಸರಣಿಯಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಆಡಲು ಎದುರು ನೋಡುತ್ತಿದ್ದೇನೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಜೀಶ್ ಹೇಜಲ್‌ವುಡ್ ಅಲಭ್ಯತೆಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವಿರುದ್ಧ ಆಡಿದ್ದ ಬೋಲಂಡ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು.
"ಕೆಲ ವರ್ಷಗಳ ಹಿಂದೆಯಾಗಿದ್ದರೆ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಆಡುತ್ತೇನೆ ಎನ್ನುತ್ತಿದ್ದೆ. ಆದರೆ ಈಗ ಅದು ಕಷ್ಟ ಎನಿಸುತ್ತದೆ. ಈ ಸರಣಿಯಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಆಡುವುದು ನನ್ನ ಗುರಿಯಾಗಿದೆ. ಹಾಗೂ ನಾಲ್ಕು ಸಾಧ್ಯವಾಗಲಿದೆಯಾ ಎಂದು ನೋಡಬೇಕಿದೆ" ಎಂದಿದ್ದಾರೆ ಜೋಶ್ ಹೇಜಲ್‌ವುಡ್. ಜೋಶ್ ಹೇಜಲ್‌ವುಡ್ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡಿದ್ದಾರೆ. ಆದರೆ ಗಾಯದ ಕಾರಣದಿಂದಾಗಿ ಜೋಶ್ ಕೆಲವೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
ಇನ್ನು ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಲಿಯಾನ್ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ಅನುಪಸ್ಥಿತಿಯನ್ನು ಉಲ್ಲೇಖಿಸಿದ್ದಾರೆ. "ಇದು ಬಹಳ ಕಠಿಣವಾದ ಸಂದರ್ಭ. ಅವರ ಧ್ವನಿಯನ್ನು ಈ ಬಾರಿ ಕೇಳಿಕೊಳ್ಳುವುದಿಲ್ಲ. ಮೈಕ್ ಹಿಡಿದುಕೊಂಡರೆ ಆತ ರಿಚಿ ಬೆನೌಡ್ ರೀತಿ. ಆತನಲ್ಲಿರುವ ಅಗಾಧವಾದ ಜ್ಞಾನವನ್ನು ಅವರು ತಮ್ಮಂತಾ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೂ ಹಂಚುತ್ತಿದ್ದರು" ಎಂದು ನಥನ್ ಲಿಯಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಎಸ್‌ಪಿಎನ್ ಕ್ರಿಕ್ ಇನ್‌ಫೋ ವರದಿ ಮಾಡಿದೆ.
ಆಸ್ಟ್ರೇಲಿಯನ್ ಕ್ರಿಕೆಟಿಗರು ಮತ್ತು ಸ್ಪಿನ್ನರ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನದ ಮೂಲಕ ದಿಗ್ಗಜ ಆಟಗಾರ ಹೆಮ್ಮೆ ಪಡುವಂತೆ ಮಾಡಬಹುದು ಎಂದು ನಥನ್ ಲಿಯಾನ್ ಭರವಸೆ ವ್ಯಕ್ತಪಡಿಸಿದ್ದಾರೆ. "ಕ್ರಿಕೆಟ್ ಜಗತ್ತು ಅವರನ್ನು ಪ್ರತಿದಿನವೂ ಮಿಸ್ ಮಾಡಿಕೊಳ್ಳುತ್ತದೆ. ನಾವು ಆಸ್ಟ್ರೇಲಿಯಾದ ಕ್ರಿಕೆಟಿಗರು, ಆಸ್ಟ್ರೇಲಿಯಾದ ಸ್ಪಿನ್ನರ್‌ಗಳು ಮೈದಾನಕ್ಕಿಳಿದು ಅವರು ಹೆಮ್ಮೆ ಪಡುವಂತೆ ಮಾಡಬಹುದು" ಎಂದಿದ್ದಾರೆ ಲಿಯಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications