ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಆಶಸ್ ಸರಣಿ ಆರಂಭವಾಗಿದ್ದು ಮೊದಲ ಪಂದ್ಯ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮಾತನಾಡಿದ್ದು ಇಂಗ್ಲೆಂಡ್ ತಂಡದ ಬ್ಯಾಸ್‌ಬಾಲ್ ಶೈಲಿಯ ಬ್ಯಾಟಿಂಗನ್ನು ಮುಂದುವರಿಸಬೇಕು ಎಂದಿದ್ದಾರೆ.
ಬೆನ್ ಸ್ಟೋಕ್ ನಾಯಕತ್ವ ಹಾಗೂ ಬ್ರೆಂಡನ್ ಮೆಕ್ಕಲಮ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಅಳವಡಿಸಿಕೊಂಡಿದ್ದುಅದರಲ್ಲಿ ಯಶಸ್ಸನ್ನೂ ಸಾಧಿಸಿದೆ. ಕಳೆದ 17 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದ್ದು ಈ ಮಾದರಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.

ಆಸ್ಟ್ರೇಲಿಯಾ ತಂಡ ಈ ಪಂದ್ಯಕ್ಕೆ ಮಿಚೆಲ್ ಸ್ಟಾರ್ಕ್ ಬದಲಿಗೆ ಜೋಶ್ ಹೇಜಲ್‌ವುಡ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ಟೀಮ್ ಇಂಡಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೋಲಂಡ್ ಅವರನ್ನು ಆಡುವ ಬಳಗದಲ್ಲಿ ಉಳಿದುಕೊಂಡಿದ್ದಾರೆ. ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ 487 ಟೆಸ್ಟ್ ವಿಕೆಟ್‌ಗಳನ್ನು ಪಡೆದುಕೊಂಡಿರುವ ನಥನ್ ಲಿಯಾನ್ ಅವರು ಕೂಡ ಆಡುವ ಬಳಗದಲ್ಲಿದ್ದಾರೆ.
"ಆಸ್ಟ್ರೇಲಿಯಾ ತಂಡವನ್ನು ಮಣಿಸಬೇಕಿದ್ದರೆ ಆಕ್ರಮಣಕಾರಿಯಾಗಿ ಕಣಕ್ಕಿಳಿಯಬೇಕಿದೆ. ಆಸ್ಟ್ರೇಲಿಯಾದಂತ ತಂಡದ ವಿರುದ್ಧ ಅಂಥಾ ಆಟವನ್ನು ಆಡಬೇಕಿದ್ದರೆ ಆಕ್ರಮಣಕಾರಿ ಪ್ರದರ್ಶನ ನೀಡಬೇಕಿದೆ. ನೀವು ರಣತಂತ್ರದಲ್ಲಿ ನಿಧಾನವಾಗಿರುವುದಕ್ಕಿಂತ ಈ ರೀತಿಯ ಆಟದಲ್ಲಿ ಗೆಲ್ಲುವ ಅವಕಾಶವನ್ನು ಹೊಂದಿದ್ದೀರಿ. ನೀವು ನಿಜವಾಗಿಯೂ ಅವರಿಗೆ ಈ ರೀತಿಯಲ್ಲಿಯೇ ದಾಳಿ ನಡೆಸಬೇಕು ಎಂದಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠತ ಆಶಸ್ ಸರಣಿ ಇಂದಿನಿಂದ ಆರಂಬವಾಗಲಿದೆ. ಎರಡು ತಂಡಗಳು ಬಲಿಷ್ಠ ತಂಡದೊಂದಿಗೆ ಈ ಸರಣಿಗೆ ಸಜ್ಜಾಗಿದ್ದು ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ್ದು ಬಹುತೇಕ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವುದು ತಮಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ.
ಮತ್ತೊಂದೆಡೆ ಇಂಗ್ಲೆಂಡ್ ತಂಡ ತವರಿನಲ್ಲಿ ನಡೆದ ಆಶಸ್‌ನಲ್ಲಿ ಅಮೋಘ ದಾಖಲೆ ಹೊಂದಿದ್ದು ಎರಡು ದಶಕದಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ತವರಿನಲ್ಲಿ ಎಲ್ಲಾ ತಂಡಗಳನ್ನು ಹಿಮ್ಮೆಟ್ಟಿಸಿದೆ. ಆಸ್ಟ್ರೇಲಿಯಾವನ್ನು ಕೂಡ ಅದೇ ಶೈಲಿಯಲ್ಲಿ ಹಿಮ್ಮೆಟ್ಟಿಸುವುದು ಇಂಗ್ಲೆಂಡ್ ಪಾಳಯದ ಲೆಕ್ಕಾಚಾರ. ಅದಕ್ಕೆ ಪೂರಕವಾಗಿ ತಂಡವನ್ನು ಸಿದ್ಧಗೊಳಿಸಿದ್ದು ಅಂಗಳದಲ್ಲಿ ಇದು ಯಾವ ರೀತಿ ಕಾರ್ಯರೂಪಕ್ಕೆ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.