Ashes 2023: ನಾಥನ್ ಲಿಯಾನ್ ಗಾಯ ಆಶಸ್ ಸರಣಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ; ವಾಸಿಂ ಜಾಫರ್
ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 2023ರ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡ ದೊಡ್ಡ ಮುನ್ನಡೆ ಪಡೆದುಕೊಂಡಿದೆ.
ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್‌ಗಳಿಗೆ ಆಲೌಟ್ ಆಗಿದ್ದರೆ, ಪ್ರತ್ಯುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆಸೀಸ್ ತಂಡ 91 ರನ್‌ಗಳ ಮುನ್ನಡೆ ಪಡೆದುಕೊಂಡು ಮೂರನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
ಇನ್ನು ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಗಾಯದಿಂದಾಗಿ ಎರಡನೇ ದಿನದಾಟದಲ್ಲಿ ಅಂತ್ಯದಲ್ಲಿ ಮೈದಾನದಿಂದ ಹೊರನಡೆದರು. ಇದು ಪ್ರವಾಸಿ ತಂಡಕ್ಕೆ ದೊಡ್ಡ ಹಿನ್ನಡೆ ತಂದೊಡ್ಡಿದೆ.

ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ 2ನೇ ದಿನದಾಟದಲ್ಲಿ ಮೈದಾನದಿಂದ ಹೊರಗುಳಿದ ನಂತರ, ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಅನುಕೂಲವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದಿಂದ ಹೊರಬರುತ್ತಿರುವ ಆರಂಭಿಕ ವರದಿಗಳ ಪ್ರಕಾರ, ನಾಥನ್ ಲಿಯಾನ್ ಅವರ ಹಿಮ್ಮಡಿಗೆ ತೀವ್ರವಾದ ಗಾಯವಾಗಿದ್ದು, ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ಸಾಧ್ಯತೆಯಿಲ್ಲ ಎಂದು ಸೂಚಿಸುತ್ತವೆ.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಾಥನ್ ಲಿಯಾನ್ ಅವರ ಸತತ 100ನೇ ಟೆಸ್ಟ್ ಪಂದ್ಯವಾಡುತ್ತಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿದ್ದರು.
ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವಾಸಿಂ ಜಾಫರ್ ಟ್ವೀಟ್ ಮಾಡಿದ್ದು, ನಾಥನ್ ಲಿಯಾನ್‌ರನ್ನು ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗದ ದೊಡ್ಡ ಭಾಗ ಎಂದು ಕರೆದಿದ್ದಾರೆ.
"ಎರಡನೇ ಟೆಸ್ಟ್ ಪಂದ್ಯಕ್ಕೆ ನಾಥನ್ ಲಿಯಾನ್ ಅಲಭ್ಯವಾದರೆ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾಗೆ ದೊಡ್ಡ ಹಿನ್ನಡೆಯಾಗಲಿದೆ, ಮುಂದಿನ ಪಂದ್ಯಗಳಿಗೂ ಸಹ. ಇನ್ನು ಇಂಗ್ಲೆಂಡ್ ತಂಡಕ್ಕೆ ಅನುಕೂಲವೆಂದರೆ ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ನಾಥನ್ ಲಿಯಾನ್ ಹೊರಗುಳಿದಿರುವುದು," ಎಂದು ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.
3ನೇ ದಿನದ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನಾಥನ್ ಲಿಯಾನ್ ಅವರು ಊರುಗೋಲಿನಲ್ಲಿ ಕಾಣಿಸಿಕೊಂಡರು. ಗಾಯಗೊಂಡ ಕಾಲಿಗೆ ಅವರು ಕಂಪ್ರೆಷನ್ ಸಾಕ್ಸ್ ಧರಿಸಿದ್ದರು ಮತ್ತು ನಿಧಾನವಾಗಿ ಕ್ರೀಡಾಂಗಣಕ್ಕೆ ತೆರಳಿದರು.
ಆದರೂ, ಆಸ್ಟ್ರೇಲಿಯ ತಂಡವು ನಾಥನ್ ಲಿಯಾನ್ ಅವರ ಅನುಪಸ್ಥಿತಿಯಲ್ಲಿ ಉತ್ತಮ ದಿನವಾಗಿಸಿಕೊಂಡಿತು. ಮಿಚೆಲ್ ಸ್ಟಾರ್ಕ್ 3ನೇ ದಿನದ ಆರಂಭದಲ್ಲಿ ಬೆನ್ ಸ್ಟೋಕ್ಸ್ ಮತ್ತು ಹ್ಯಾರಿ ಬ್ರೂಕ್ ಇಬ್ಬರನ್ನೂ ಔಟ್ ಮಾಡಿದರು. ನಂತರ ಜಾನಿ ಬೈರ್‌ಸ್ಟೋವ್ ಅವರು ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಮಿಡ್-ಆನ್‌ನಲ್ಲಿ ನಿಂತಿದ್ದ ಪ್ಯಾಟ್ ಕಮ್ಮಿನ್ಸ್ ಕೈಗೆ ಸರಳ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 6 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಒಂದು ವೇಳೆ ಬಲಗೈ ಸ್ಪಿನ್ನರ್ ನಾಥನ್ ಲಿಯಾನ್ ಅವರು ಆಶಸ್ ಸರಣಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಟಾಡ್ ಮರ್ಫಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇನ್ನು ಮ್ಯಾಥ್ಯೂ ಕುಹ್ನೆಮನ್ ಕೂಡ ಬದಲಿ ಆಟಗಾರನಾಗುವ ನಿರೀಕ್ಷೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications