ನಾಯಕ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಆಟಗಾರನಾಗಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅವರ 155 ರನ್‌ಗಳ ಶತಕ ನಿರ್ಣಾಯಕವಾಗಿತ್ತು. ಬೆನ್ ಸ್ಟೋಕ್ಸ್ ವಿಕೆಟ್ ಪತನದ ನಂತರ, ಇಂಗ್ಲೆಂಡ್‌ನ ಬ್ಯಾಟಿಂಗ್ ವಿಭಾಗವು ಕುಸಿಯಿತು ಮತ್ತು ಆಸ್ಟ್ರೇಲಿಯಾ ಸುಲಭವಾಗಿ ಗೆಲುವು ಸಾಧಿಸಿತು.
ಇಂಗ್ಲೆಂಡ್ ತಂಡದ ನಾಯಕರಾಗಿ ಬೆನ್ ಸ್ಟೋಕ್ಸ್ ಅವರು ವಿಶೇಷವಾಗಿ ಬ್ಯಾಟರ್ ಆಗಿ ಒತ್ತಡದ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಇಂಗ್ಲೆಂಡ್‌ನ ಎಡಗೈ ಬ್ಯಾಟರ್‌ನ ಫಿನಿಶಿಂಗ್ ಸಾಮರ್ಥ್ಯವನ್ನು ಭಾರತೀಯ ಮಾಜಿ ಕ್ರಿಕೆಟಿಗ ಎಂಎಸ್ ಧೋನಿಯೊಂದಿಗೆ ಹೋಲಿಕೆ ಮಾಡಿದ್ದಾರೆ.

ರಿಕಿ ಪಾಂಟಿಂಗ್ ಅವರು 2023ರ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಎರಡನೇ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಅನ್ನು ಶ್ಲಾಘಿಸುವಾಗ, 2019ರ ಆಶಸ್‌ನಲ್ಲಿ ಬೆನ್ ಸ್ಟೋಕ್ಸ್ ಅದ್ಭುತ ಪ್ರದರ್ಶನವನ್ನು ಸಹ ನೆನಪಿಸಿಕೊಂಡರು.
ಬೆನ್ ಸ್ಟೋಕ್ಸ್ ಅವರು ತಮ್ಮ ಅಜೇಯ 135 ರನ್‌ಗಳ ಮೂಲಕ 359 ರನ್‌ಗಳ ಗುರಿಯನ್ನು ಇನ್ನೂ ಒಂದು ವಿಕೆಟ್ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಿದರು. ಇಂಗ್ಲೆಂಡ್ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದ್ದರಿಂದ ಆ ಶತಕ ನಿರ್ಣಾಯಕವಾಗಿತ್ತು. ಆದರೆ ಐದನೇ ಪಂದ್ಯದ ಕೊನೆಯಲ್ಲಿ ಸರಣಿಯು 2-2 ಅಂತರದಲ್ಲಿ ಸಮಬಲವಾಯಿತು.
"ನಾನು ಯೋಚಿಸಿದೆ ಮತ್ತು ಎಲ್ಲರೂ ಬಹುಶಃ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಬಹುದು ಎಂದು ಭಾವಿಸಿದ್ದರು. ಏಕೆಂದರೆ ನಾವು ಇದನ್ನು ಮೊದಲು ನೋಡಿದ್ದೇವೆ. ಆದರೆ ಇಲ್ಲಿ ಹೆಚ್ಚಿನ ರನ್‌ಗಳ ಅವಶ್ಯಕತೆ ಇತ್ತು," ಎಂದು ರಿಕಿ ಪಾಂಟಿಂಗ್ ಅವರು ದಿ ಐಸಿಸಿ ರಿವ್ಯೂನ ಇತ್ತೀಚಿನ ಸಂಚಿಕೆಯಲ್ಲಿ ತಿಳಿಸಿದ್ದಾರೆ.

"ಎಲ್ಲರ ಮನಸ್ಸಿನಲ್ಲಿ ಒಮ್ಮೆ 2019ರ ಹೆಡಿಂಗ್ಲಿ ಟೆಸ್ಟ್ ಬಂದು ಹೋಗಿತ್ತು. ಎಷ್ಟು ಸಾಮ್ಯತೆಗಳಿವೆ ಎಂದು ನಾನು ಭಾವಿಸುವುದಾದರೆ, ಇಲ್ಲಿ ಸ್ಟೀವ್ ಸ್ಮಿತ್ ಅವರು ಬೆನ್ ಸ್ಟೋಕ್ಸ್ ನೀಡಿದ ಕ್ಯಾಚ್ ಕೈಬಿಟ್ಟರು ಮತ್ತು ಹೆಡಿಂಗ್ಲಿಯಲ್ಲಿ 116 ರನ್ ಗಳಿಸಿದ್ದಾಗ ಮಾರ್ಕಸ್ ಹ್ಯಾರಿಸ್ ಕ್ಯಾಚ್ ಬಿಟ್ಟಿದ್ದರು. ಹಿಂದಿನ ಭೀತಿಗಳು ಮತ್ತೆ ಹೊರಬಂದಿದ್ದವು," ಎಂದು ರಿಕಿ ಪಾಂಟಿಂಗ್ ಹೇಳಿದರು.
32 ವರ್ಷದ ಬೆನ್ ಸ್ಟೋಕ್ಸ್ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಪಂದ್ಯ ವಿಜೇತ ಆಟಗಾರನಾಗಿ ತಮ್ಮನ್ನು ತಾವು ವೃದ್ಧಿಗೊಳಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಅವರ ಸಾಮರ್ಥ್ಯವು ಆಶ್ಚರ್ಯಕರವಾಗಿದೆ.
2022ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಎಡಗೈ ಬ್ಯಾಟರ್ ಪಾಕಿಸ್ತಾನದ ವಿರುದ್ಧ ಅಜೇಯ 52 ರನ್ ಗಳಿಸಿದರು ಮತ್ತು 2019ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯ 98 ರನ್ ಗಳಿಸುವ ಮೂಲಕ ಅವರು ತಮ್ಮ ತಂಡವನ್ನು ಚಾಂಪಿಯನ್ ಮಾಡಿದರು ಎಂದು ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
"ಮೊದಲಿಗೆ ಮನಸ್ಸಿಗೆ ಬರುವುದು ಎಂಎಸ್ ಧೋನಿಯಂತಹ ಮ್ಯಾಚ್ ಫಿನಿಶರ್. ಅವರು ಬಹಳಷ್ಟು ಟಿ20 ಪಂದ್ಯಗಳಲ್ಲಿ ಆಟವನ್ನು ಮುಗಿಸುತ್ತಾರೆ. ಆದರೆ ಬೆನ್ ಸ್ಟೋಕ್ಸ್ ಅವರು ಟೆಸ್ಟ್ ಪಂದ್ಯಗಳಲ್ಲಿಯೂ ಇದನ್ನು ಮಾಡುತ್ತಾರೆ. ಕ್ರಿಕೆಟ್‌ನ ಇತಿಹಾಸದ ಮೂಲಕ ಅನೇಕ ಆಟಗಾರರು ಫಿನಿಶರ್ ಪಾತ್ರದಲ್ಲಿ ತಮ್ಮನ್ನು ತಾವು ಕಂಡುಕೊಂಡಿದ್ದಾರೆ, ವಿಶೇಷವಾಗಿ ನಾಯಕರಾಗಿ ಕೊನೆಯಲ್ಲಿ ಪಂದ್ಯಗಳನ್ನು ಗೆಲ್ಲಿಸಿದ್ದಾರೆ," ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.
ಐದು ಪಂದ್ಯಗಳ ಆಶಸ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರೋಚಕವಾಗಿ ಸತತ ಸೋಲುಗಳ ನಂತರ ಬೆನ್ ಸ್ಟೋಕ್ಸ್ ಅವರು ಹೆಡಿಂಗ್ಲಿಯಲ್ಲಿ ಮೂರನೇ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಾರೆ. ಮೂರನೇ ಟೆಸ್ಟ್ ಪಂದ್ಯ ಗುರುವಾರ, ಜುಲೈ 6ರಂದು ಆರಂಭವಾಗಲಿದೆ.