ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಒಬ್ಬರು. ಆಸ್ಟ್ರೇಲಿಯಾ ತಂಡದ ಪರವಾಗಿ ಸಾಕಷ್ಟಿ ಅಚ್ಚಳಿಯದ ದಾಖಲೆ ಬರೆದಿರುವ ಪಾಂಟಿಂಗ್ ತಮ್ಮ ದೇಶದ ಮತ್ತೋರ್ವ ಆಟಗಾರನ ಬಗ್ಗೆ ಮನಬಿಚ್ಚಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಎನಿಸಿಕೊಂಡಿರುವ ಡಾನ್ ಬ್ರಾಡ್ಮನ್‌ಗೆ ಹೋಲಿಕೆ ಮಾಡಿರುವ ಪಾಂಟಿಂಗ್ ಬ್ರಾಡ್ಮನ್ ನಂತರ ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಕ್ರಿಕೆಟಿಗ ಎಂದು ಬಣ್ಣಿಸಿದ್ದಾರೆ.
ಅಂದಹಾಗೆ ರಿಕಿ ಪಾಂಟಿಂಗ್ ಇಷ್ಟು ಹೊಗಳಿಕೆಯ ಮಾತುಗಳನ್ನಾಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಅಸ್ತ್ರ ಮಾಜಿ ನಾಯಕ ಸ್ಟೀವ್ ಸ್ಮಿತ್ ವಿಚಾರವಾಗಿ. 100ನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿರುವ ಸ್ಮಿತ್ ಬಗ್ಗೆ ಪಾಂಟಿಂಗ್ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದು ಆತ ದೊಡ್ಡ ಸಾಧನೆಗಳನ್ನು ಅತ್ಯಲ್ಪಕಾಲದಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈವರೆಗೆ 99 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟೀವ್ ಸ್ಮಿತ್ 59.56 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು 53.78 ಸ್ಟ್ರೈಕ್ ರೇಟ್‌ನಲ್ಲಿ 9113 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 32 ಶತಕಗಳು ನಾಲ್ಕು ದ್ವಿಶತಕಗಳು ಮತ್ತು 37 ಅರ್ಧ ಶತಕಗಳು ಹೊಂದಿದ್ದಾರೆ. 2017-18ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಬಾರಿಸಿದ 239 ರನ್ ಅವರ ಅತ್ಯಧಿಕ ಟೆಸ್ಟ್ ಸ್ಕೋರ್.
ಆಶಸ್ ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮಿತ್ 184 ಎಸೆತಗಳಲ್ಲಿ 110 ರನ್ ಗಳಿಸುವ ಮೂಲಕ ತಮ್ಮ 32ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದ್ದರು. ಈ ಶತಕದಿಂದಾಗಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಪಡೆದುಕೊಂಡಿದ್ದು ನಂತರ ಪಂದ್ಯದ ಗೆಲುವಿಗೂ ಇದು ಕಾರಣವಾಯಿತು.
ಡೈಲಿ ಮೇಲ್‌ಗೆ ನಾಸಿರ್ ಹುಸೇನ್ ಜೊತೆಗೆ ನೀಡಿದ ಸಂದರ್ಶನದಲ್ಲಿ ರಿಕಿ ಪಾಂಟಿಂಗ್ ಮಾತನಾಡಿದ್ದು ಈ ಸಂದರ್ಭದಲ್ಲಿ ನಾಸಿರ್ ಹುಸೇನ್ ಪಾಂಟಿಂಗ್ ಬಳಿ "ಸ್ಟೀವ್ ಸ್ಮಿತ್ 100ನೇ ಟೆಸ್ಟ್ ಪಂದ್ಯವನ್ನು ಆಡಿತ್ತಿದ್ದಾರೆ, ಈಸ ಂದರ್ಭದಲ್ಲಿ ಆಸ್ಟ್ರೇಲಿಯಾದ ದಿಗ್ಗಜರ ಪಟ್ಟಿಯಲ್ಲಿ ಅವರಿಗೆ ಎಲ್ಲಿ ಸ್ಥಾನವನ್ನು ನೀಡುತ್ತೀರಿ?" ಎಂದು ಪ್ರಶ್ನಿಸಿದರು.
"ಅವರು 100ನೇ ಪಂದ್ಯವನ್ನು ಪೂರ್ತಿಗೊಳಿಸಲಿದ್ದು ಡಾನ್ ಬ್ರಾಡ್ಮನ್ ಬಳಿಕ ಆಸ್ಟ್ರೇಲಿಯಾ ಕಂಡ ಎರಡನೇ ಅತಿ ಶ್ರೇಷ್ಠ ಬ್ಯಾಟ್ಸ್‌ಮನ್. ಅಂಕಿಅಂಶಗಳನ್ನು ಇಟ್ಟುಕೊಂಡು ನೀವು ಇದನ್ನು ವಾದಿಸಲು ಸಾಧ್ಯವಿಲ್ಲ. ಆತ ದೊಡ್ಡ ದೊಡ್ಡ ಸಾಧನೆಗಳನ್ನು ಬಹಳ ಬೇಗನೆ ಮಾಡಿರುವ ಆಟಗಾರ. ಲಾರ್ಡ್ಸ್‌ನಲ್ಲಿ ಕೂಡ ಆತ 9000 ಟೆಸ್ಟ್ ರನ್‌ಗಳನ್ನು ಬಾರಿಸಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ" ಎಂದು ಪಾಂಟಿಂಗ್ ಹೊಗಳಿದ್ದಾರೆ.
ಹೆಡಿಂಗ್ಲೆಯಲ್ಲಿ ಗುರುವಾರದಿಂದ ಆಶಸ್ ಸರಣಿಯ ಮೂರನೇ ಪಂದ್ಯ ಆರಂಭವಾಗಲಿದ್ದು ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಇನ್ನು ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಹೀಗಾಗಿ ಈಗಾಗಲೇ ಸರಣಿಯಲ್ಲಿ ಆಸಿಸ್ ಪಡೆ 2-0 ಅಂತರದಿಂದ ಮುನ್ನಡೆಯಲ್ಲಿದೆ. ಹೀಗಾಗಿ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವನ್ನೂ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಕಾತರದಲ್ಲಿದೆ ಆಸಿಸ್ ಪಡೆ. 2001ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಆಶಸ್ ಗೆಲ್ಲಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ಈ ಬಾರಿ ಆ ಸಾಧನೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ.