ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರವಾಗಿ ಅದ್ಭುತ ಬ್ಯಾಟಿಂಗ್ ನಡೆಸಿರುವ ಸ್ಟೀವ್ ಸ್ಮಿತ್ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದು ಪಂದ್ಯದಲ್ಲಿ ಮೇಲುಗೈ ಸಾಧಿಸಲು ಕಾರಣವಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಸ್ಟೀವ್ ಸ್ಮಿತ್ ಸಿಡಿಸಿದ 32ನೇ ಶತಕವಾಗಿದೆ.
ಮೊದಲ ದಿನದಾಟದಲ್ಲಿ 85 ರನ್‌ಗಳಿಸಿದ್ದ ಸ್ಟೀವ್ ಸ್ಮಿತ್ ಮಾರ್ನಸ್ ಲ್ಯಾನುಶೇನ್ ಹಾಗೂ ಟ್ರೆವಿಸ್ ಹೆಡ್ ಜೊತೆಗೆ ಶತಕದ ಜೊತೆಯಾಟ ನೀಡುವ ಮೂಲಕ ತಂಡ ದೊಡ್ಡ ಮೊತ್ತದತ್ತ ಹೆಜ್ಜೆಯಿಡಲು ಕಾರಣವಾದರು. ಈ ಜೋಡಿಯ ಬಳಿಕ ಸ್ಟೀವ್ ಸ್ಮಿತ್‌ಗೆ ಹೇಳಿಕೊಳ್ಳುವಂತಾ ಉತ್ತಮ ಸಾತ್ ದೊರೆಯದಿದ್ದರೂ ಎರಡನೇ ದಿನದಾಟದಲ್ಲಿ ಸ್ಮಿತ್ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರ 12ನೇ ಶತಕ ಇದಾಗಿದೆ ಎಂಬುದು ಗಮನಾರ್ಹ.

ಮೊದಲ ದಿನದಾಟದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡ ನಂತರ ಸ್ಟೀವ್ ಸ್ಮಿತ್ ಕ್ರೀಸ್‌ಗೆ ಇಳಿದಿದ್ದದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ 96 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ನಂತರ ಸ್ಮಿತ್ ಇಂಗ್ಲೆಂಡ್ ದಾಳಿಯನ್ನು ಅದ್ಭುತವಾಗಿ ಹಿಮ್ಮೆಟ್ಟಿಸುತ್ತಾ ಸಾಗಿದ್ದು ಮಾರ್ನಸ್ ಲ್ಯಾಬುಶೇನ್ ಜೊತೆಗೆ 102 ರನ್‌ಗಳ ಜೊತೆಯಾಟ ನಡೆಸಿದರು. ಮಾರ್ನಸ್ 47 ರನ್‌ಗಳಿಗೆ ಔಟಾದ ಬಳಿಕ ಸ್ಮಿತ್ ಟ್ರೆವಿಸ್ ಹೆಡ್ ಜೊತೆಗೆ 118 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಇನ್ನು ಶತಕ ಸಿಡಿಸಿದ ಬಳಿಕ ಸ್ಟೀವ್ ಸ್ಮಿತ್ ಕೂಡ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ. 184 ಎಸೆತಗಳನ್ನು ಎದುರಿಸಿದ ಸ್ಟೀವ್ ಸ್ಮಿತ್ 110 ರನ್‌ಗಳಿಸಿದ ಸಂದರ್ಭದಲ್ಲಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಸ್ಮಿತ್ ಅವರ ಭರ್ಜರಿ ಶತಕದಿಂದಾಗಿ ಆಸ್ಟ್ರೇಲಿಯಾ 400 ರನ್‌ಗಳ ಗಡಿಯತ್ತ ತಲುಪಿತು.
ಇನ್ನು ಈಗಾಗಲೇ ಹೇಳಿದಂತೆ ಇದು ಸ್ಟೀವ್ ಸ್ಮಿತ್ ಅವರ 32ನೇ ಟೆಸ್ಟ್ ಶತಕವಾಗಿದೆ. ಈ ಶತಕದ ಮೂಲಕ ಸ್ಮಿತ್ ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ವಾ ಅವರ 32 ಶತಕಗಳ ಸಾಧನೆಯನ್ನು ಸರಿಗಟ್ಟಿದ್ದಾರೆ. ಇನ್ನು ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆಟಗಾರರ ಪೈಕಿ ರಿಕಿ ಪಾಂಟಿಂಗ್ ಮಾತ್ರವೇ ಸ್ಟೀವ್ ಸ್ಮಿತ್ ಅವರಿಗಿಂತ ಮುಂದಿದ್ದಾರೆ. ಪ್ರತಿತ ಆಡುತ್ತಿರುವ ಆಟಗಾರರ ಪೈಕಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಹೊಂದಿರುವ ಆಟಗಾರ ಎಂಬ ದಾಖಲೆ ಕೂಡ ಸ್ಮಿತ್ ಹೆಸರಿನಲ್ಲಿಯೇ ಇದೆ. ಟೆಸ್ಟ್ ಮಾದರಿಯಲ್ಲಿ ಸ್ಮಿತ್ 37 ಅರ್ಧಶತಕಗಳನ್ನು ಕೂಡ ಹೊಂದಿದ್ದಾರೆ.
ಇನ್ನು ಈ ಇನ್ನಿಂಗ್ಸ್‌ನ ಆರಂಭದಲ್ಲಿ ಸ್ಮಿತ್ ಟೆಸ್ಟ್ ಮಾದರಯಲ್ಲಿ ಎರಡನೇ ಅತ್ಯಂತ ವೇಗವಾಗಿ 9000 ರನ್‌ಗಳಿಸಿದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. 174 ಇನ್ನಿಂಗ್ಸ್‌ಗಳಲ್ಲಿ ಸ್ಮಿತ್ ಈ ಸಾಧನೆ ಪೂರ್ಣಗೊಳಿಸಿದ್ದಾರೆ. 172 ಇನ್ನಿಂಗ್ಸ್‌ಗಳಲ್ಲಿ ಸಾಧನ ಮಾಡಿರುವ ಕುಮಾರ್ ಸಂಗಕ್ಕರ ಮಾತ್ರವೇ ಸ್ಮಿತ್‌ಗಿಂತ ಮುಂದಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15000 ರನ್‌ಗಳ ಮೈಲಿಗಲ್ಲನ್ನು ಕೂಡ ದಾಟಿದ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 41ನೇ ಆಟಗಾರ ಸ್ಟೀವ್ ಸ್ಮಿತ್. ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಪ್ರಸ್ತುತ ಆಡುತ್ತಿರುವ ಆಟಗಾರರ ಪೈಕಿ ಈ ಸಾಧನೆ ಮಾಡಿರುವ ಕೇವಲ ಎರಡನೇ ಆಟಗಾರ ಸ್ಟೀವ್ ಸ್ಮಿತ್.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್, ಜೋಶ್ ಟಂಗ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ರೆಹಾನ್ ಅಹ್ಮದ್
ಆಸ್ಟ್ರೇಲಿಯಾ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಜೋಶ್ ಹ್ಯಾಜಲ್ವುಡ್, ನಾಥನ್ ಲಿಯಾನ್
ಬೆಂಚ್: ಮಿಚೆಲ್ ಮಾರ್ಷ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್