ಆಶಸ್ ಸರಣಿಯ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟವನ್ನು ತಲುಪಿದೆ. ಎರಡನೇ ದಿನದಾಟದಲ್ಲಿ ಎರಡು ತಂಡಗಳು ಕೂಡ ಭರ್ಜರಿ ಹೋರಾಟ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಫಿಲ್ಡಿಂಗ್ ವೇಳೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೋ ರೂಟ್ ಅವರ ಕ್ಯಾಚನ್ನು ಅದ್ಭುತವಾಗಿ ಪಡೆದು ರೂಟ್ ವಿಕೆಟ್ ಕಳೆದುಕೊಳ್ಳಲು ಕಾರಣವಾದರು. ಸ್ಮಿತ್ ಪಡೆದ ಈ ಕ್ಯಾಚ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತದ ಶುಬ್ಮನ್ ಗಿಲ್ ಬಲಿ ಪಡೆಯಲು ಕಾರಣವಾದ ಕ್ಯಾಮರೂನ್ ಗ್ರೀನ್ ಕ್ಯಾಚ್‌ಗೆ ಹೋಲಿಕೆಯಾಗಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಲಾರ್ಡ್ಸ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದದು ಶತಕವನ್ನು ಪೂರ್ತಿಗೊಳಿಸಿದ್ದಾರೆ. ಸ್ಮಿತ್ ಅವರ ಈ ಶತಕದ ಕಾರಣದಿಂದಾಗಿ ಆಸ್ಟ್ರೇಲಿಯಾ ನಾನೂರರ ಗಡಿ ದಾಟುವಂತಾಗಿದೆ. ಇನ್ನು ಫಿಲ್ಡಿಂಗ್‌ನಲ್ಲಿಯೂ ಸ್ಟೀವ್ ಸ್ಮಿತ್ ಮಿಂಚಿನ ಪ್ರದರ್ಶನ ನಿಡಿದ್ದು ಇಂಗ್ಲೆಂಡ್‌ನ ಪ್ರಮುಖ ದಾಂಡಿಗ ಜೋ ರೂಟ್ ಅವರು 10 ರನ್ ಗಳಿಸುವಷ್ಟರಲ್ಲಿ ಔಟಾಗಲು ಕಾರಣವಾದರು.

ಆದರೆ ಆದರೆ ಸ್ಮಿತ್ ಅವರು ಪಡೆದ ಈ ಕ್ಯಾಚ್ ಡೈವ್ ಹಿಡಿದು ಪಡೆದುಕೊಂಡರಾದರೂ ಚೆಂಡು ಅಂಗಳಕ್ಕೆ ತಾಕಿದೆ ಎಂಬುದು ಕೆಲ ಅಭಿಮಾನಿಗಳ ವಾದ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರ ಕ್ಯಾಚನ್ನು ಕ್ಯಾಮರೂನ್ ಗ್ರೀನ್ ಪಡೆದು ವಿವಾದಾತ್ಮಕ ರೀತಿಯಲ್ಲಿ ಔಟ್ ನೀಡಿದ್ದಕ್ಕೆ ಹೋಲಿಸಲಾಗುತ್ತಿದೆ.
ಮೊದಲ ದಿನದಾಟದಲ್ಲಿ 85 ರನ್‌ಗಳಿಸಿದ್ದ ಸ್ಟೀವ್ ಸ್ಮಿತ್ ಮಾರ್ನಸ್ ಲ್ಯಾನುಶೇನ್ ಹಾಗೂ ಟ್ರೆವಿಸ್ ಹೆಡ್ ಜೊತೆಗೆ ಶತಕದ ಜೊತೆಯಾಟ ನೀಡುವ ಮೂಲಕ ತಂಡ ದೊಡ್ಡ ಮೊತ್ತದತ್ತ ಹೆಜ್ಜೆಯಿಡಲು ಕಾರಣವಾದರು. ಈ ಜೋಡಿಯ ಬಳಿಕ ಸ್ಟೀವ್ ಸ್ಮಿತ್‌ಗೆ ಹೇಳಿಕೊಳ್ಳುವಂತಾ ಉತ್ತಮ ಸಾತ್ ದೊರೆಯದಿದ್ದರೂ ಎರಡನೇ ದಿನದಾಟದಲ್ಲಿ ಸ್ಮಿತ್ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರ 12ನೇ ಶತಕ ಇದಾಗಿದೆ ಎಂಬುದು ಗಮನಾರ್ಹ.
ಮೊದಲ ದಿನದಾಟದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡ ನಂತರ ಸ್ಟೀವ್ ಸ್ಮಿತ್ ಕ್ರೀಸ್‌ಗೆ ಇಳಿದಿದ್ದದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ 96 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ನಂತರ ಸ್ಮಿತ್ ಇಂಗ್ಲೆಂಡ್ ದಾಳಿಯನ್ನು ಅದ್ಭುತವಾಗಿ ಹಿಮ್ಮೆಟ್ಟಿಸುತ್ತಾ ಸಾಗಿದ್ದು ಮಾರ್ನಸ್ ಲ್ಯಾಬುಶೇನ್ ಜೊತೆಗೆ 102 ರನ್‌ಗಳ ಜೊತೆಯಾಟ ನಡೆಸಿದರು. ಮಾರ್ನಸ್ 47 ರನ್‌ಗಳಿಗೆ ಔಟಾದ ಬಳಿಕ ಸ್ಮಿತ್ ಟ್ರೆವಿಸ್ ಹೆಡ್ ಜೊತೆಗೆ 118 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಇನ್ನು ಶತಕ ಸಿಡಿಸಿದ ಬಳಿಕ ಸ್ಟೀವ್ ಸ್ಮಿತ್ ಕೂಡ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ. 184 ಎಸೆತಗಳನ್ನು ಎದುರಿಸಿದ ಸ್ಟೀವ್ ಸ್ಮಿತ್ 110 ರನ್‌ಗಳಿಸಿದ ಸಂದರ್ಭದಲ್ಲಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಸ್ಮಿತ್ ಅವರ ಭರ್ಜರಿ ಶತಕದಿಂದಾಗಿ ಆಸ್ಟ್ರೇಲಿಯಾ 400 ರನ್‌ಗಳ ಗಡಿಯತ್ತ ತಲುಪಿತು.