ಆಶಸ್ ಟೆಸ್ಟ್ ಸರಣಿಯ ಪ್ರತಿ ಪಂದ್ಯದ ಪ್ರತಿ ದಿನ ಕೂಡ ಒಂದಲ್ಲಾ ಒಂದು ವಿವಾದಗಳು ನಡೆಯುತ್ತಲೇ ಇದೆ. ಇದು ಲಾರ್ಡ್ಸ್ ಟೆಸ್ಟ್ ಪಂದ್ಯದ ಕೊನೆಯ ದಿನವೂ ಮುಂದುವರಿದಿದ್ದು ಸಾಕಷ್ಟು ಚರ್ಚೆಗಳಿಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಕೊನೆಯ ದಿನದಾಟದ ನಿರ್ಣಾಯಕ ಘಟ್ಟದಲ್ಲಿ ಜಾನಿ ಬೈರ್‌ಸ್ಟೋವ್ ವಿಕೆಟ್ ಕಳೆದುಕೊಂಡ ರೀತಿ ಇದಕ್ಕೆ ಕಾರಣ.
ಲಾರ್ಡ್ಸ್ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಜಾನಿ ಬೈರ್‌ಸ್ಟೋವ್ ಚೆಂಡು ಡೆಡ್ ಆಗುವ ಮುನ್ನವೇ ಕ್ರೀಸ್‌ಗಿಂತ ಮುಂದೆ ಹೋಗಿದ್ದರು. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ತಕ್ಷಣವೇ ಅಲರ್ಟ್ ಆಗಿದ್ದು ವಿಕೆಟ್‌ಗೆ ಚೆಂಡು ಎಸೆದು ಬೇಲ್ಸ್ ಹಾರಿಸಿದರು. ಈ ಸಂದರ್ಭದಲ್ಲಿ ಚೆಂಡು ಡೆಡ್ ಆಗುವ ಮುನ್ನ ಬೈರ್‌ಸ್ಟೋವ್ ಕ್ರೀಸ್ ಬಿಟ್ಟಿದ್ದು ಸ್ಪಷ್ಟವಾಗಿದ್ದು ಔಟ್ ತೀರ್ಪೊಉ ನೀಡಲಾಯಿತು. ಈ ವಟ್ ವಿಚಾರವಾಗಿ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರೀಡಾಸ್ಪೂರ್ತಿಯನ್ನು ಬಿಟ್ಟು ಆಡಿದೆ ಎಂಬುದು ಒಂದು ಕಡೆಯ ವಾದವಾದರೆ ಆಸ್ಟ್ರೇಲಿಯಾ ಮಾಡಿದ್ದು ಸರಿಯಾಗಿದೆ ಎಂಬುದು ಮತ್ತೊಂದು ಅಭಿಪ್ರಾಯ. ಈ ವಿಚಾರವಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ನಾಯಕರಾದ ಪ್ಯಾಟ್ ಕಮ್ಮಿನ್ಸ್ ಹಾಗೂ ಬೆನ್ ಸ್ಟೋಕ್ಸ್ ಇಬ್ಬರು ಕೂಡ ತಮ್ಮ ತಮ್ಮ ಅನಿಸಿಕೆಯನ್ನು ಪಂದ್ಯದ ಮುಕ್ತಾಯದ ಬಳಿಕ ಹಂಚಿಕೊಂಡಿದ್ದಾರೆ.
ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಇಡೀ ಘಟನೆಯ ಬಗ್ಗೆ ತನ್ನ ನಿಲುವನ್ನು ಹಂಚಿಕೊಂಡಿದ್ದಾರೆ. ತಾನಾಗಿದ್ದರೆ ಈ ಪಂದ್ಯವನ್ನು ರೀತಿಯಾಗಿ ಬಯಸುತ್ತಿರಲಿಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾ ತಂಡದ ನಡೆಯ ಬಗ್ಗೆ ಭಿನ್ನಾಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಅದು ಔಟ್ ಎಂಬ ಸತ್ಯವನ್ನು ನಾನು ಅಲ್ಲಗಳೆಯುವುದಿಲ್ಲ ಯಾಕೆಂದರೆ ಅದು ಔಟ್. ಆದರೆ ನಾನು ಅವರ ಭಾಗದಲ್ಲಿದ್ದರೆ ಅಂಪಯರ್‌ಗಳ ಮೇಲೆ ಒತ್ತಡವನ್ನು ಹಾಕಿ ಬ್ಯಾಟರ್‌ಗೆ ಮತ್ತೆ ಆಡಿಸಲು ಅವಕಾಶ ನೀಡಿರುತ್ತಿದ್ದೆ. ನಾನು ಕ್ರೀಡಾಸ್ಪೂರ್ತಿಯ ಬಗ್ಗೆ ಆಳವಾದ ನಂಬಿಕೆಯನ್ನು ಹೊಂದಿದ್ದು ನಾನು ಅಂಥಾ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್.
ಮುಂದುವರಿದು ಬೆನ್ ಸ್ಟೋಕ್ಸ್ "ಆಸ್ಟ್ರೇಲಿಯಾ ತಂಡಕ್ಕೆ ಅದು ಮ್ಯಾಚ್ ವಿನ್ನಿಂಗ್ ಕ್ಷಣ. ಆದರೆ ನಾನು ಆ ರೀತಿಯಲ್ಲಿ ಪಂದ್ಯವ್ನು ಗೆಲ್ಲಲು ಬಯಸುತ್ತಿದ್ದೆನಾ? ಅದಕ್ಕೆ ನನ್ನ ಉತ್ತರ ಇಲ್ಲ" ಎಂದು ಆಸ್ಟ್ರೇಲಿಯಾ ತಂಡದ ನಿಲುವಿನ ಬಗ್ಗೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಇಂಗ್ಲೆಂಡ್ ನಾಯಕನ ಅನಿಸಿಕೆಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದು ನಿಯಮದ ಒಳಗೇ ಇರುವ ಈತಿಯಲ್ಲಿ ಮಾಡಿರುವ ಔಟ್ ಎಂದು ಹೇಳಿಕೊಂಡಿದ್ದಾರೆ. "ಅಲೆಕ್ಸ್ ಕ್ಯಾರಿ ಇದಕ್ಕೂ ಮುನ್ನವೇ ಹಲವು ಬಾರಿ ಇದೇ ರೀತಿ ಆಗಿರುವುದನ್ನು ನೋಡಿದ್ದಾರೆ. ಅಲ್ಲಿ ಯಾವುದೇ ತಡೆ ಇರಲಿಲ್ಲ. ಕ್ಯಾಚ್ ಪಡೆದರು ಹಾಗೂ ನೇರವಾಗಿ ವಿಕೆಟ್‌ಗೆ ಚೆಂಡು ಎಸೆದಿದ್ದಾರೆ"
"ನನ್ನ ಪ್ರಕಾರ ಇದು ಸಂಪೂರ್ಣವಾಗಿ ನ್ಯಾಯಯುತವಾದ ಆಟ. ನಿಯಮ ಇರುವುದೇ ಹಾಗೆ. ಕೆಲವರು ಇದನ್ನು ಒಪ್ಪಿಕೊಳ್ಳದೆ ಇರಬಹುದು. ನಿನ್ನೆ ಕ್ಯಾಚ್ ವಿಚಾರದಲ್ಲಿ ಇದ್ದ ಹಾಗೆಯೇ ಇಲ್ಲಿಯೂ ನಿಯಮ ಇದೆ. ನಾನು ಇದನ್ನು ಆ ದೃಷ್ಟಿಕೋನದಲ್ಲಿ ನೋಡುತ್ತೇನೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.