ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲಿ ಸೋಲು ಅನುಭವಿಸಿರುವ ಇಂಗ್ಲೆಂಡ್ ತಂಡ ಎರಡನೇ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕೆಲ ನಿರ್ಧಾರಗಳ ಬಗ್ಗೆ ಇನ್ನೂ ಚರ್ಚೆಗಳು ಮುಂದುವರಿದಿದ್ದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಡೆ ಕುತೂಹಲ ಮೂಡಿಸಿದೆ. ಅದರಲ್ಲೂ ಬ್ಯಾಸ್‌ಬಾಲ್ ಆಟಕ್ಕೆ ಬಂದಿರುವ ಮಿಶ್ರ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾಕ್ ಕ್ರಾವ್ಲೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ತಂಡ ಫಲಿತಾಂಶದ ಬಗ್ಗ ಗಮನಹರಿಸುತ್ತಿಲ್ಲ. ನಮ್ಮ ಗಮನ ಇರುವುದು ಮನರಂಜನೆ ಈಡುವುದರ ಮೇಲೆ ಎಂದಿದ್ದಾರೆ ಜಾಕ್ ಕ್ರಾವ್ಲೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದ ಬಳಿಕ ಕ್ರಾವ್ಲೆ ಈ ಹೇಳಿಕೆ ನೀಡಿದ್ದಾರೆ.

ಟೈಮ್ಸ್ ರೇಡಿಯೋಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಕ್ರಾವ್ಲೆ ಈ ಮಾತನಾಡಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು ಅಂತಿಮ ದಿನದಲ್ಲಿ 174 ರನ್‌ಗಳ ಅಗತ್ಯವಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಎರಡು ವಿಕೆಟ್ ಉಳಿದಿಕೊಂಡು ರೋಚಕವಾಗಿ ಗೆದ್ದು ಬೀಗಿದೆ.
"ನಮ್ಮೆಲ್ಲರ ಗಮನ ಫಲಿತಾಂಶಗಳ ಬಗ್ಗೆ ಇಲ್ಲ. ನಾವು ಮನರಂಜನೆ ನೀಡುವುದರ ಮೇಲೆ ಚಿತ್ತ ನೆಟ್ಟಿದ್ದೇವೆ. ನಾವು ಯಾವಾಗಲೂ ಅದರ ಬಗ್ಗೆಯೇ ಚರ್ಚಿಸುತ್ತೇವೆ. ನಾವು ಗೆಲ್ಲುವ ಅಥವಾ ಸೋಲುವ ಬಗ್ಗೆ ಯೋಚಿಸುವುದಿಲ್ಲ" ಎಂದಿದ್ದಾರೆ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾಕ್ ಕ್ರಾವ್ಲೆ. ಬ್ಯಾಸ್‌ಬಾಲ್ ಶೈಲಿಯ ಆಟದ ಬಗ್ಗೆ ಪ್ರಶ್ನೆಗಳು ಎದ್ದಿರುವ ಸಂದರ್ಭದಲ್ಲಿ ಇಂಗ್ಲೆಂಡ್ ಆಟಗಾರ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಇಂಗ್ಲೆಂಡ್ ತಂಡದ ಈ ಆಟದ ಬಗ್ಗೆ ಕ್ರಿಕೆಟ್ ಪಂಡಿತರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಇಂಗ್ಲೆಂಡ್ ತಂಡ ಮಾತ್ರ ತಮ್ಮ ಆಟದ ಶೈಲಿಯನ್ನು ಬದಲಾಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೊಂಡಿದೆ. ನಾಯಕ ಬೆನ್ ಸ್ಟೋಕ್ಸ್ ಹಾಗೂ ಕೋಚ್ ಮೆಕ್ಕಲಮ್ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
"ಅವರು ನಮ್ಮ ರಣತಂತ್ರದ ಪ್ರಕಾರವೇ ಮುಂದಿವರಿಯುತ್ತಾರೆ ಎಂಬ ವಿಶ್ವಾಸವಿದೆ. ಅದು ಬಹಳ ಮುಖ್ಯ. ಯಾಕೆಂದರೆ ಮುಂದೆ ನಾವು ಇದಕ್ಕಿಂತಲೂ ಆಕ್ರಮಣಕಾರಿಯಾಗಿ ಮುನ್ನುಗ್ಗಲಿದ್ದೇವೆ. ನಾವು ಆಡಿದ ರೀತಿ ನಮ್ಮ ಆಟದ ಶೈಲಿಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಸ್ವಲ್ಪ ಅದೃಷ್ಟ ನಮ್ಮಪಾಳಿಗಿದ್ದರೆ ನಾವು ಫಲಿತಾಂಶದ ತ್ತೊಂದು ಭಾಗದಲ್ಲಿರುತ್ತಿದ್ದೆವು" ಎಂದಿದ್ದಾರೆ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್.
ಇನ್ನು ಇದಕ್ಕೂ ಮುನ್ನ ನಾಯಕ ಬೆನ್ ಸ್ಟೋಕ್ಸ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. "ಸೋಲು ಅಂದರೆ ಅದು ಸೋಲು. ಆದರೆ ನಾವು ಹೇಗೆ ಕಾರ್ಯನಿರ್ವಹಿಸಲಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಸೋಲಿನಿಂದ ನೋವುಂಟಾಗುತ್ತದೆ ಮತ್ತು ಗೆಲ್ಲುವುದು ಒಂದು ಅದ್ಭುತ ಭಾವನೆ. ಇದು ಸರಿಯಾದ ಸಮಯ ಎಂದುಕೊಂಡು ನಾವು ಮುಂದುವರಿಯುತ್ತೇವೆ. ಈ ರೀತಿಯ ಫಲಿತಾಂಶಗಳ ಮೂಲಕ ನಮ್ಮ ವಿರುದ್ಧ ಫಲಿತಾಂಗಳು ಬಂದಾಗಲೂ ಅದರ ಬಗ್ಗೆ ದೂರುವುದಿಲ್ಲ" ಎಂದು ಪಂದ್ಯ ಮುಕ್ತಾಯದ ಬಳಿಕದ ಕಾ್ಯಕ್ರಮದಲ್ಲಿ ಬೆನ್ ಸ್ಟೋಕ್ಸ್ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಪಂದ್ಯದ ಮೊದಲ ದಿನದಾಟದಲ್ಲಿ ಜೋ ರೂಟ್ ಶತಕ ಸಿಡಿಸಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿರುವಾಗ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸನ್ನು ಎಂಟು ವಿಕೆಟ್ ನಷ್ಟಕ್ಕೆ 393 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ನಿರ್ಧಾರ ಅನೇಕರನ್ನು ಆಶ್ಚರ್ಯಗೊಳಿಸಿತು. ಆದರೆ ಸ್ಟೋಕ್ಸ್ ಈ ನಿರ್ಧಾರದ ಹಿಂದಿನ ಕಾರಣವನ್ನು ಕೂಡ ವಿವರಿಸಿದ್ದಾರೆ.