ಗುರುವಾರ, ಜುಲೈ 6ರಿಂದ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಿರುವ 2023ರ ಆಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 26 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಎದುರಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ 263 ರನ್‌ಗಳಿಗೆ ಉತ್ತರವಾಗಿ, ಇಂಗ್ಲೆಂಡ್ ತಂಡ 237 ರನ್‌ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 26 ರನ್‌ಗಳ ಮುನ್ನಡೆ ಸಾಧಿಸಿ, ಶುಕ್ರವಾರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಎರಡನೇ ದಿನದಾಟದಂತ್ಯಕ್ಕೆ 116 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ.
ಆರಂಭಿಕರಾದ ಡೇವಿಡ್ ವಾರ್ನರ್ 1 ರನ್ ಗಳಿಸಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಸಾಗಿದರೆ, ಉಸ್ಮಾನ್ ಖವಾಜಾ 43 ರನ್ ಬಾರಿಸಿ ಔಟಾದರು. ಮಾರ್ನಸ್ ಲ್ಯಾಬ್ಯಸ್ಚಾಗ್ನೆ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸ್ಟೀವನ್ ಸ್ಮಿತ್ 2 ರನ್ ಗಳಿಸಿ ಔಟಾದರು.

ಸದ್ಯ ಟ್ರಾವಿಸ್ ಹೆಡ್ 18 ರನ್ ಮತ್ತು ಮಿಚೆಲ್ ಮಾರ್ಷ್ 17 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಪರ ಬೌಲಿಂಗ್‌ನಲ್ಲಿ ಸ್ಪಿನ್ನರ್ ಮೊಯಿನ್ ಅಲಿ 2 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದು ಆಸೀಸ್ ತಂಡಕ್ಕೆ ಆಘಾತ ನೀಡಿದರು.
ಇನ್ನು ಮೊದಲ ದಿನದಾಟದಂತ್ಯಕ್ಕೆ 68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡ ಎರಡನೇ ದಿನದಾಟ ಆರಂಭಿಸಿದ ನಂತರ, 18 ರನ್ ಗಳಿಸಿದ್ದ ಜೋ ರೂಟ್ ವಿಕೆಟ್ ಕಳೆದುಕೊಂಡಿತು. ನಂತರ ಜಾನಿ ಬೈರ್‌ಸ್ಟೋವ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ಬೆನ್ ಸ್ಟೋಕ್ಸ್ ಮಾತ್ರ 108 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸಮೇತ 80 ರನ್ ಗಳಿಸಿದರು. ಆಲ್‌ರೌಂಡರ್ ಮೊಯಿನ್ ಅಲಿ 21 ರನ್, ಕ್ರಿಸ್ ವೋಕ್ಸ್ 10 ರನ್, ಮಾರ್ಕ್ ವುಡ್ 24 ರನ್, ಸ್ಟುವರ್ಟ್ ಬ್ರಾಡ್ 7 ರನ್, ಒಲ್ಲಿ ರಾಬಿನ್ಸನ್ 5 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ನಾಯಕ ಪ್ಯಾಟ್ ಕಮ್ಮಿನ್ಸ್ 18 ಓವರ್‌ಗಳಲ್ಲಿ 91 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ 14 ಓವರ್‌ಗಳಲ್ಲಿ 59 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಮಾರ್ಷ್ ಮತ್ತು ಟಾಡ್ ಮರ್ಫಿ ತಲಾ ಒಂದೊಂದು ವಿಕೆಟ್ ಪಡೆದರು.