ಗುರುವಾರ, ಜುಲೈ 6ರಿಂದ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಿರುವ 2023ರ ಆಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.
ಆತಿಥೇಯ ಇಂಗ್ಲೆಂಡ್ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 26 ರನ್‌ಗಳ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ 263 ರನ್‌ಗಳಿಗೆ ಉತ್ತರವಾಗಿ, ಇಂಗ್ಲೆಂಡ್ ತಂಡ 237 ರನ್‌ಗಳಿಗೆ ಸರ್ವಪತನ ಕಂಡಿತು.
ಮೊದಲ ದಿನದಾಟದಂತ್ಯಕ್ಕೆ 68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡ ಎರಡನೇ ದಿನದಾಟ ಆರಂಭಿಸಿದ ನಂತರ, 18 ರನ್ ಗಳಿಸಿದ್ದ ಜೋ ರೂಟ್ ವಿಕೆಟ್ ಕಳೆದುಕೊಂಡಿತು. ನಂತರ ಜಾನಿ ಬೈರ್‌ಸ್ಟೋವ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಾಯಕ ಬೆನ್ ಸ್ಟೋಕ್ಸ್ ಮಾತ್ರ 108 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸಮೇತ 80 ರನ್ ಗಳಿಸಿದರು. ಆಲ್‌ರೌಂಡರ್ ಮೊಯಿನ್ ಅಲಿ 21 ರನ್, ಕ್ರಿಸ್ ವೋಕ್ಸ್ 10 ರನ್, ಮಾರ್ಕ್ ವುಡ್ 24 ರನ್, ಸ್ಟುವರ್ಟ್ ಬ್ರಾಡ್ 7 ರನ್, ಒಲ್ಲಿ ರಾಬಿನ್ಸನ್ 5 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ನಾಯಕ ಪ್ಯಾಟ್ ಕಮ್ಮಿನ್ಸ್ 18 ಓವರ್‌ಗಳಲ್ಲಿ 91 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ 14 ಓವರ್‌ಗಳಲ್ಲಿ 59 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಮಾರ್ಷ್ ಮತ್ತು ಟಾಡ್ ಮರ್ಫಿ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ದಿನದಂದು ಮಿಚೆಲ್ ಮಾರ್ಷ್ ಅವರ 118 ರನ್‌ಗಳ ಶತಕದ ನೆರವಿವನಿಂದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್ ಕಲೆಹಾಕಿತ್ತು. ಇಂಗ್ಲೆಂಡ್ ತಂಡದ ಪರ ವೇಗದ ಬೌಲರ್ ಮಾರ್ಕ್ ವುಡ್ 34 ರನ್ ನೀಡಿ 5 ವಿಕೆಟ್ ಪಡೆದುಕೊಂಡಿದ್ದರು.
ಸದ್ಯ ಮೊದಲ ಇನ್ನಿಂಗ್ಸ್‌ನಲ್ಲಿ 26 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿದದೆ. ಆರಂಭಿಕ ಡೇವಿಡ್ ವಾರ್ನರ್ 1 ರನ್ ಗಳಿಸಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಸಾಗಿದರು.
ಉಸ್ಮಾನ್ ಖವಾಜಾ 10 ರನ್ ಮತ್ತು ಮಾರ್ನಸ್ ಲ್ಯಾಬ್ಯಸ್ಚಾಗ್ನೆ 4 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ತಂಡದ ಮೊತ್ತ 1 ವಿಕೆಟ್‌ಗೆ 15 ರನ್‌ಗಳಾಗಿವೆ.