ಸಿಡ್ನಿ: ಭರವಸೆಯ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಹಾಗೂ ನಾಯಕ ಸ್ಟೀವನ್ ಸ್ಮಿತ್ ಅವರು ಬಾರಿಸಿದ ಶತಕದ ಬಲದಿಂದ ಆಸ್ಟ್ರೇಲಿಯಾ ಆಷಸ್ ಟೆಸ್ಟ್ ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಮೂರನೇ ದಿನದಾಟವನ್ನು ಆಸೀಸ್ 2 ವಿಕೆಟ್‌ಗೆ 166 ರನ್‌ಗಳಿಂದ ಆಟ ಮುಂದುವರೆಸಿತು. ಈ ವೇಳೆ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರು ಅಬ್ಬರದ ಆಟವನ್ನು ಮಂಗಳವಾರವೂ ಮುಂದುವರೆಸಿದರು. ಇವರು 166 ಎಸೆತಗಳಲ್ಲಿ 24 ಬೌಂಡರಿ, 1 ಸಿಕ್ಸರ್ ಸಹಾಯದಿಂದ 163 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಇವರು ದೊಡ್ಡ ದಾಖಲೆ ಬರೆದರು. 23 ವರ್ಷಗಳಿಂದ ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟರ್ ಮಾಡದ ಸಾಧನೆಯನ್ನು ಇವರು ಮಾಡಿ ಬೀಗಿದರು.

23 ವರ್ಷಗಳ ಬಳಿಕ ಆಷಸ್ ಸರಣಿಯಲ್ಲಿ ಮೂರು ಶತಕ ಬಾರಿಸಿದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಟ್ರಾವಿಸ್ ಹೆಡ್ ಪಾಲಾಯಿತು. ಇವರಿಗೂ ಮೊದಲು 2002-03ರ ಆಷಸ್ ಸರಣಿಯಲ್ಲಿ ಮ್ಯಾಥ್ಯೂ ಹೇಡನ್ ಅವರು ಈ ಸಾಧನೆಯನ್ನು ಮಾಡಿದ್ದರು. ಟ್ರಾವಿಸ್ ಹೆಡ್ ಅವರಿಗೆ ಅವರ ಟೆಸ್ಟ್ ವೃತ್ತಿ ಜೀವನದ 12ನೇ ಶತಕವಾಗಿದೆ. ಅಲ್ಲದೆ ಸಿಡ್ನಿ ಅಂಗಳದಲ್ಲಿ ಮೊದಲ ಶತಕವನ್ನು ಸಹ ದಾಖಲಿಸಿ ಅಬ್ಬರಿಸಿದರು. ಈ ಸರಣಿಯಲ್ಲಿ ಟ್ರಾವಿಸ್ ಹೆಡ್ ಅವರು ಆಡಿದ 5 ಪಂದ್ಯಗಳ 9 ಇನಿಂಗ್ಸ್‌ನಲ್ಲಿ 66ರ ಸರಾಸರಿಯಲ್ಲಿ 600 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ. ಈ ಮೂಲಕ ಈ ಸರಣಿಯಲ್ಲಿ ಇವರು ಅಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ಸಹ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 166 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ಮೂಲಕ ಇವರು ತಮ್ಮ ಟೆಸ್ಟ್ ವೃತ್ತಿ ಜೀವನದ 37ನೇ ಶತಕವನ್ನು ದಾಖಲಿಸಿದರು. ಇದು ಆಶಸ್ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರ 13 ನೇ ಶತಕವಾಗಿದೆ. ಈ ಸರಣಿಯಲ್ಲಿ ಗರಿಷ್ಠ ಶತಕವನ್ನು ಬಾರಿಸಿದ ಲೆಕ್ಕಾಚಾರದಲ್ಲಿ ಈಗ ಇವರು ಎರಡನೇ ಸ್ಥಾನ ತಲುಪಿದ್ದಾರೆ. ಆಷಸ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಇವರು 19 ಶತಕ ಸಿಡಿಸಿದ್ದಾರೆ.