ಇಂಗ್ಲೆಂಡ್ ತಂಡ ಆಶಸ್ ಸರಣಿಗೆ ಸಿದ್ಧತೆಗಳನ್ನು ಆರಂಭಿಸುವ ಹೊತ್ತಿನಲ್ಲಿ ತಂಡಕ್ಕೆ ದೊಡ್ಡದೊಂದು ಆಘಾತ ಎದುರಾಗಿದೆ, ತಂಡದ ಪ್ರಮುಖ ಸ್ಪಿನ್ನರ್ ಜಾಕ್ ಲೀಚ್ ಗಾಯದಿಂದಾಗಿ ಆಶಸ್ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಬೆನ್ನುನೋವಿನ ಗಾಯಕ್ಕೆ ತುತ್ತಾಗಿರುವ ಜಾಕ್ ಲೀಚ್ ಆಶಸ್ ಸರಣಿಗೆ ಲಭ್ಯವಿಲ್ಲ ಎಂಬುದನ್ನು ಇಂಗ್ಲೆಂಡ್ ಮತ್ತಿ ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಜಾಕ್ ಲೀಚ್ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್ ಕಿತ್ತು ಲೀಚ್ ಗಮನಸೆಳೆದಿದ್ದರು. ಆದರೆ ಈ ಪಂದ್ಯದ ಸಂದರ್ಭದಲ್ಲಿಯೇ ಅವರು ಗಾಯಕ್ಕೆ ತುತ್ತಾಗಿದ್ದು ಆಶಸ್ ಸರಣಿಯಿಂದ ಹೊರಗುಳಿಯುವಂತಾಗಿದೆ. ಇಂಗ್ಲೆಂಡ್ ಜಾಕ್ ಲೀಚ್‌ಗೆ ಬದಲಿ ಆಟಗಾರನ್ನು ಈವರೆಗೆ ಹೆಸರಿಸಿಲ್ಲ.

ಇಂಗ್ಲೆಂಡ್ ತಂಡ ಕಳೆದ ವರ್ಷ ಬೆನ್ ಸ್ಟೋಕ್ಸ್ ನಾಯಕತ್ವ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಮ್ ಮಾರ್ಗದರ್ಶನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಗೆಲುವಿನ ಮೇಲೆ ಗೆಲುವು ಸಾಧಿಸಿತ್ತು. ಈ ಪ್ರದರ್ಶನದಲ್ಲಿ ಜಾಕ್ ಲೀಚ್ ಕೊಡುಗೆ ಕುಡ ಗಮನಾರ್ಹ. ಅಂದರೆ ಕಳೆದ ಒಂದು ವರ್ಷದಲ್ಲಿ ಜಾಕ್ ಲೀಚ್ ಒಟ್ಟು 46 ವಿಕೆಟ್‌ಗಳನ್ನು ಇಂಗ್ಲೆಂಡ್ ಪರ ಕಬಳಿಸಿದ್ದರು.
ಶನಿವಾರವಷ್ಟೇ ECB ಆಶಸ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ 16 ಆಟಗಾರರ ತಂಡವನ್ನು ಹೆಸರಿಸಿತ್ತು. ಆದರೆ ಅದಾದ ಬಳಿಕ ಜಾಕ್ ಲೀಚ್ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ. ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗ ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ತಂಡದ ವೇಗದ ಬೌಲರ್ ಜೋಫ್ರ ಆರ್ಚರ್ ಕೂಡ ಈ ಸರಣಿಗೆ ಗಾಯದ ಕಾರಣಕ್ಕೆ ಲಭ್ಯವಾಗುತ್ತಿಲ್ಲ.
ಇನ್ನು ಈ ಬಗ್ಗೆ ಇಸಿಬಿ ಅಧಿಕೃತ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. "ಭಾನುವಾರ ಸ್ಕ್ಯಾನ್ ಮಾಡಲಾಗಿದ್ದು ಸ್ಟ್ರೆಸ್ ಫ್ರಾಕ್ಚರ್‌ಗೆ ಒಳಗಾಗಿರುವುದು ದೃಢಪಟ್ಟಿದೆ. ಆದ್ದರಿಂದ ಅವರು ಸಂಪೂರ್ಣ ಆಶಸ್ ಸರಣಿಯಿಂದ ಹೊರಗುಳಿಯುವಂತಾಗಿದೆ. ಅವರು ಅಲಭ್ಯವಾಗಿರುವ ಕಾರಣ ಬದಲಿ ಆಟಗಾರನನ್ನು ಶೀರ್ಘರದಲ್ಲೇ ಹೆಸರಿಸಲಾಗುತ್ತದೆ" ಎಂದು ಇಸಿಬಿ ಮಾಹಿತಿ ನೀಡಿದೆ.
ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಆಲಿ ಪೋಪ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೋ ರೂಟ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಝಾಕ್ ಕ್ರಾಲಿ, ಮ್ಯಾಥ್ಯೂ ಪಾಟ್ಸ್, ಆಲ್ಲಿ ರಾಬಿನ್ಸನ್, ಡಾನ್ ಲಾರೆನ್ಸ್, ಕ್ರಿಸ್ ವೋಕ್ಸ್ , ಮಾರ್ಕ್ ವುಡ್, ಜೋಶ್ ಟಂಗ್.