ಆಶಸ್ ಟೆಸ್ಟ್: ಎರಡನೇ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ಮೂವರು ಆಸಿಸ್ ಆಟಗಾರರು

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಗಾಬಾ ಟೆಸ್ಟ್‌ನಲ್ಲಿ ಆಸಿಸ್ ಪಡೆ ಇಂಗ್ಲೆಂಡ್ ತಂಡಕ್ಕೆ ಆಘಾತಕಾರಿ ಸೋಲಿನ ಕಹಿ ನೀಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆಸಿಸ್ ಪಡೆ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ಎರಡು ತಂಡಗಳು ಕೂಡ ಎರಡನೇ ಟೆಸ್ಟ್ ಮೇಲೆ ಚಿತ್ತ ನೆಟ್ಟಿದೆ. ಡಿಸೆಂಬರ್ 16ರಿಂದ ಅಡಿಲೇಡ್ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ.
ಇನ್ನು ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಎರಡನೇ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡುವ ಆತ್ಮ ವಿಶ್ವಾಸದಲ್ಲಿದೆ. ತಂಡದ ಪ್ರಮುಖ ಆಟಗಾರರು ಉತ್ತಮ ಲಯದಲ್ಲಿರುವ ಕಾರಣದಿಂದಾಗಿ ಪ್ರವಾಸಿಗರ ವಿರುದ್ಧ ಮೇಲುಗೈ ಸಾಧಿಸಲು ಸಿದ್ಧವಾಗಿದ್ದಾರೆ. ಮತ್ತೊಂದೆಡೆ ಮೊದಲ ಪಂದ್ಯವನ್ನು ಸೋತ ಬಳಿಕ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಪ್ರಯತ್ನದಲ್ಲಿ ಇಂಗ್ಲೆಂಡ್ ತಂಡ ಕೂಡ ತೀವ್ರ ಪೈಪೋಟಿಗೆ ಸಿದ್ಧತೆ ನಡೆಸಿದೆ.
ಇನ್ನು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಈ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೂವರು ಆಟಗಾರರು ವಿಶೇಷ ಮೈಲಿಗಲ್ಲನ್ನು ನೆಡಲಿದ್ದಾರೆ. ಆ ಮೂವರು ಆಟಗಾರರು ಯಾರು? ಅವರ ಮೈಲಿಗಲ್ಲುಗಳು ಯಾವುದು? ಇಲ್ಲಿದೆ ಮಾಹಿತಿ

2000 ಟೆಸ್ಟ್ ರನ್‌ಗಳ ಸನಿಹ ಲ್ಯಾಬುಶೈನ್
ಆಸ್ಟ್ರೇಲಿಯಾ ತಂಡದ ಯುವ ಆಟಗಾರ ಮಾರ್ನಾಸ್ ಲ್ಯಾಬುಶೈನ್ ಆಸಿಸ್ ಕ್ರಿಕೆಟ್‌ನ ಭವಿಷ್ಯದ ಆಟಗಾರನಾಗಿದ್ದಾರೆ. ಈಗಾಗಲೇ ಟೆಸ್ಟ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಲ್ಯಾಬುಶೈನ್ ಮೊದಲ ಪಂದ್ಯದಲ್ಲಿ 74 ರನ್‌ಗಳ ಕೊಡುಗೆ ನೀಡುವ ಮೂಲಕ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 425 ರನ್‌ಗಳ ಉತ್ತಮ ಮೊತ್ತ ಗಳಿಸಲು ಸಹಕಾರ ನೀಡಿದ್ದರು. ಈವರೆಗೆ 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಲ್ಯಾಬುಶೈನ್ 61.22ರ ಸರಾಸರಿಯ್ಲಲಿ 1959 ರನ್‌ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್‌ಗಳ ಮೈಲಿಗಲ್ಲು ತಲುಪಲು ಲ್ಯಾಬುಶೈನ್‌ಗೆ ಬೇಕಿರುವುದು ಕೇವಲ 41 ರನ್ ಮಾತ್ರ. ಅಡಿಲೇಡ್ ಟೆಸ್ಟ್‌ನಲ್ಲಿ ಈ ಮೊತ್ತವನ್ನು ಸುಲಭವಾಗಿ ಗಳಿಸುವ ಸಾಧ್ಯತೆಯಿದೆ.

ಜಸ್ಟಿನ್ ಲ್ಯಾಂಗರ್ ಹಿಂದಿಕ್ಕಲು ಸಜ್ಜಾದ ಸ್ಮಿತ್
ಆಧುನಿಕ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರನೆಂದು ಕರೆಸಿಕೊಳ್ಳುವ ಆಸಿಸ್ ದಾಂಡಿಗ ಸ್ಟೀವ್ ಸ್ಮಿತ್ ಈವರೆಗೆ ಆಡಿರುವ 78 ಟೆಸ್ಟ್ ಪಂದ್ಯಗಳಲ್ಲಿ 7552 ರನ್‌ಗಳನ್ನು ಬಾರಿಸಿದ್ದಾರೆ. 61.39ರಷ್ಟು ಸರಾಸರಿ ಹೊಂದಿದ್ದಾರೆ ಸ್ಟೀವ್ ಸ್ಮಿತ್. 27 ಶತಕ ಹಾಗೂ 31 ಅರ್ಧ ಶತಕ ಕೂಡ ಒಳಗೊಂಡಿದೆ. ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಲು ವಿಫಲವಾಗಿರುವ ಸ್ಟೀವ್ ಸ್ಮಿತ್ ತಮ್ಮ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಟೆಸ್ಟ್ ದಾಖಲೆಯನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ. 7696 ರನ್‌ಗಳಿಸಿರುವ ಜಸ್ಟಿನ್ ಲ್ಯಾಂಗರ್ ಮೈಲಿಗಲ್ಲನ್ನು ಹಿಂದಿಕ್ಕಲು ಸ್ಟೀವ್ ಸ್ಮಿತ್‌ಗೆ 145 ರನ್‌ಗಳ ಅವಶ್ಯಕತೆಯಿದೆ.

ಜಾಸನ್ ಗಿಲೆಸ್ಪಿ ಹಿಂದಿಕ್ಕಲು ಸ್ಟಾರ್ಕ್‌ಗೆ ಬೇಕು 2 ವಿಕೆಟ್
ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಟೆಸ್ಟ್ ಲೈನ್‌ಅಪ್‌ನ ಪ್ರಮುಖ ಆಟಗಾರನಾಗಿದ್ದಾರೆ. ಈ ಆಶಸ್ ಸರಣಿಯಲ್ಲಿ ತಂಡದ ಪ್ರಮುಖ ಆಟಗಾರನಾಗಿದ್ದಾರೆ ಸ್ಟಾರ್ಕ್. 62 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟಾರ್ಕ್ ಈವರೆಗೆ 258 ವಿಕೆಟ್ ಕಬಳಿಸಿದ್ದಾರೆ. 27.68 ಸರಾಸರಿಯಲ್ಲಿ ಬೌಲಿಂಗ್ ದಾಳಿ ನಡೆಸಿರುವ ಸ್ಟಾರ್ಕ್ ಎರಡು ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. 13 ಬಾರು ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಈಗ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಜಾಸನ್ ಗಿಲೆಸ್ಪಿ ಅವರ 259 ವಿಕೆಟ್‌ಗಳ ಮೈಲಿಗಲ್ಲನ್ನು ಗಿಂದಿಕ್ಕಲು ಕೇವಲ ಎರಡು ವಿಕೆಟ್‌ಗಳ ಅಗತ್ಯವಿದೆ. ಈ ಸಾಧನೆಯನ್ನು ಸ್ಟಾರ್ಕ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಸುಲಭವಾಗಿ ಸಾಧಿಸಲಿದ್ದಾರೆ.
ಆಸ್ಟ್ರೇಲಿಯಾ ಸಂಪೂರ್ಣ ಸ್ಕ್ವಾಡ್: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಉಸ್ಮಾನ್ ಖವಾಜಾ, ಮೈಕೆಲ್ ನೆಸರ್, ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್
ಇಂಗ್ಲೆಂಡ್ ಸಂಪೂರ್ಣ ಸ್ಕ್ವಾಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್, ಜಾನಿ ಬೈರ್‌ಸ್ಟೋವ್, ಕ್ರೇಗ್ ಓವರ್‌ಟನ್, ಡೇನಿಯಲ್ ಲಾರೆನ್ಸ್, ಡೊಮಿನಿಕ್ ಬೆಸ್ , ಝಾಕ್ ಕ್ರಾಲಿ, ಸ್ಟುವರ್ಟ್ ಬ್ರಾಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications