DC vs LSG IPL 2025: ಸೋಲುವ ಪಂದ್ಯವನ್ನು ಗೆದ್ದು ಬೀಗಿದ ಡೆಲ್ಲಿ: ಆಶುತೋಷ್ ಸ್ಪೋಟಕ ಆಟ
ಕೊನೆಯ ಕ್ಷಣದ ವರೆಗೂ ರೋಚಕತೆ ಹೆಚ್ಚಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದಲ್ಲಿ ಡಿಸಿ ಜಯ ಸಾಧಿಸಿದೆ. ಯುವ ಆಟಗಾರ ಆಶುತೋಷ್ ಶರ್ಮಾ ಅಮೋಘ ಹೋರಾಟದ ನೆರವಿನಿಂದ ಡೆಲ್ಲಿ, ಪ್ರಸಕ್ತ ಐಪಿಎಲ್‌ನಲ್ಲಿ ಗೆಲುವಿನ ಖಾತೆ ಓಪನ್ ಮಾಡಿದೆ. ಒಂದು ಹಂತದಲ್ಲಿ ಡೆಲ್ಲಿ ಸೋಲುತ್ತದೆ ಎಂದೇ ಭಾವಿಸಿದ್ದಾಗ ಆಶುತೋಷ್ ಡೆಲ್ಲಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಈ ಮೂಲಕ ತಾವು ಒಬ್ಬ ಬೆಸ್ಟ್ ಫಿನಿಷರ್ ಎಂಬುದನ್ನು ಸಾಬೀತು ಮಾಡಿದರು.
ಐಪಿಎಲ್‌ನ 4ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್ ಸೇರಿಸಿತು. ಈ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಕಲೆ ಹಾಕಿ ಜಯ ಸಾಧಿಸಿತು.

ಯುವ ಆಟಗಾರ ಆಶುತೋಷ್ ಶರ್ಮಾ ಹಾಗೂ ವಿಪ್ರಜ್ ನಿಗಮ್ ಜೋಡಿ 7ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಲಕ್ನೋ ತಂಡದ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 22 ಎಸೆತಗಳಲ್ಲಿ 55 ರನ್ ಸೇರಿಸಿ ಅಬ್ಬರಿಸಿತು. ವಿಪ್ರಜ್ ನಿಗಮ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿ ಔಟ್ ಆದರು. ಈ ಜೋಡಿ ಪಂದ್ಯದ ಗತಿಯನ್ನೇ ಬದಲಿಸಿತು. ಅಶುತೋಷ್ ಶರ್ಮಾ ಕೊನೆಯ ವರೆಗೆ ಹೋರಾಡಿ ಮಿಂಚಿದರು. ಇವರು 31 ಎಸೆತಗಳಲ್ಲಿ 66 ರನ್ ಸಿಡಿಸಿದರು. ಇದರಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಇವರ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು.
ಪವರ್ ಪ್ಲೇನಲ್ಲಿ ಕಳಪೆ ಆಟ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಡೆಲ್ಲಿ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶರ್ದೂಲ್ ಠಾಕೂರ್ ಕೊನೆಯ ಕ್ಷಣದಲ್ಲಿ ಲಕ್ನೋ ತಂಡ ಸೇರಿದರು. ಇವರು ಮೊದಲ ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಿ ಡೆಲ್ಲಿ ತಂಡಕ್ಕೆ ಆರಂಭಿಕ ಪೆಟ್ಟು ನೀಡಿದರು. ಇವರು ಮೊದಲ ಓವರ್‌ನಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಹಾಗೂ ಅಭಿಷೇಕ್ ಪೊರೆಲ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ಓವರ್ ಬೌಲ್ ಮಾಡಿದ ಮಣಿಮಾರನ್ ಸಿದ್ಧಾರ್ಥ್ ಸಮೀರ್ ರಿಜ್ವಿಗೆ ಖೆಡ್ಡಾ ತೋಡಿದರು. ಈ ಮೂಲಕ ಡೆಲ್ಲಿಗೆ ಲಕ್ನೋ ಆರಂಭಿಕ ಪೆಟ್ಟು ನೀಡಿದರು.
ಡೆಲ್ಲಿ ತಂಡ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡುವಲ್ಲಿ ವಿಫಲವಾಯಿತು. ಈ ವೇಳೆ ರನ್‌ಗಳನ್ನು ಗಳಿಸಿ ಅಬ್ಬರಿಸಬೇಕಿದ್ದ ಆತಿಥೇಯರು ವಿಕೆಟ್‌ಗಳನ್ನು ಕಳೆದುಕೊಂಡು ನಿರಾಸೆ ಅನುಭವಿಸಿದರು. ಪವರ್ ಪ್ಲೇ ಮುಕ್ತಾಯದ ವೇಳೆಗೆ ನಾಯಕ ಅಕ್ಷರ್ ಪಟೇಲ್ ಸಹ 22 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಡೆಲ್ಲಿ ಮೊದಲ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 58 ರನ್ ಸೇರಿಸಿ ಸಂಕಷ್ಟದಲ್ಲಿತ್ತು.
ರನ್ ವೇಗಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಫಾಫ್ ಡುಪ್ಲೇಸಿಸ್ 3 ಬೌಂಡರಿ, 2 ಸಿಕ್ಸರ್ ಸೇರಿದಂತೆ 29 ರನ್ ಬಾರಿಸಿ ರವಿ ಬಿಷ್ಣೋಯಿ ತೋಡಿದ ಖೆಡ್ಡಾಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಅಬ್ಬರದ ಬ್ಯಾಟಿಂಗ್ ನಡೆಸಿ ಗೆಲುವಿನ ಆಸೆ ಚಿಗುರಿಸಿದರು. ಇವರು ಮಣಿಮಾರನ್ ಸಿದ್ಧಾರ್ಥ್ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿ ಔಟ್ ಆದರು. ಟ್ರಿಸ್ಟಾನ್ 22 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿದರು.
ಅಬ್ಬರದ ಆರಂಭ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಎಲ್‌ಎಸ್‌ಜಿ ಪರ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಭರ್ಜರಿ ಆರಂಭವನ್ನು ನೀಡಿತು. ಈ ಜೋಡಿ 28 ಎಸೆತಗಳಲ್ಲಿ 46 ರನ್ ಸೇರಿಸಿತು. ಐಡೆನ್ ಮಾರ್ಕ್ರಾಮ್ 15 ರನ್ ಬಾರಿಸಿ ಮುನ್ನುಗುತ್ತಿದ್ದಾಗ ವಿಪ್ರಜ್ ನಿಗಮ್ ತೋಡಿದ ಖೆಡ್ಡಾಗೆ ಬಲಿಯಾದರು.
ಎಲ್‌ಎಸ್‌ಜಿ ತಂಡದ ಭರವಸೆಯ ಆಟಗಾರರಾದ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಆಕ್ರಮಣಕಾರಿ ಆಟವನ್ನು ಆಡಿತು. ಈ ಜೋಡಿ ಡೆಲ್ಲಿ ತಂಡದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿತು. ಈ ಜೋಡಿ ಪವರ್ ಪ್ಲೇನಲ್ಲಿ ಮನಮೋಹಕ ಆರಂಭವನ್ನು ನೀಡಿತು. ಎಲ್‌ಎಸ್‌ಜಿ ಮೊದಲ ಆರು ಓವರ್‌ಗಳಲ್ಲಿ 64 ರನ್ ಸಿಡಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು.
ಮಾರ್ಷ್, ಪೂರನ್ ಅರ್ಧಶತಕ
ಮಿಚೆಲ್ ಮಾರ್ಷ್ ಹಾಗೂ ಪೂರನ್ ಜೋಡಿ 42 ಎಸೆತಗಳಲ್ಲಿ 87 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲವಾಯಿತು. ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 72 ರನ್ ಸಿಡಿಸಿ ಮುಕೇಶ್ ಕುಮಾರ್ ಎಸೆತದಲ್ಲಿ ಔಟ್ ಆದರು.

ಮೂರನೇ ವಿಕೆಟ್‌ಗೆ ನಾಯಕ ರಿಷಭ್ ಪಂತ್ ಹಾಗೂ ಪೂರನ್ ಜೊತೆಗೂಡಿ 12 ಎಸೆತಗಳಲ್ಲಿ 28 ರನ್ ಸೇರಿಸಿತು. ಈ ವೇಳೆ ನಿಕೋಲಸ್ ಪೂರನ್ 6 ಬೌಂಡರಿ, 7 ಸಿಕ್ಸರ್ ಸಹಾಯದಿಂದ 75 ರನ್ ಸಿಡಿಸಿ ಅಬ್ಬರಿಸಿದರು. ನಾಯಕ ರಿಷಭ್ ಪಂತ್ ಎಲ್‌ಎಸ್‌ಜಿ ಪರ ನಾಯಕರಾಗಿ ಆಡುತ್ತಿದ್ದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದರು.
ಪೂರನ್‌ಗೆ ಜೀವದಾನ
ನಿಕೋಲಸ್ ಪೂರನ್‌ಗೆ ಈ ಪಂದ್ಯದಲ್ಲಿ ಒಂದು ಜೀವದಾನ ಸಹ ಸಿಕ್ಕಿತು. ಈ ಪಂದ್ಯದಲ್ಲಿ ವಿಪ್ರಜ್ ನಿಗಮ್ ಎಸೆತದಲ್ಲಿ 6.5ನೇ ಓವರ್‌ನಲ್ಲಿ ಪೂರನ್ ಶಾರ್ಟ್ ಬೌಲ್‌ನ್ನು ಬ್ಯಾಕ್‌ವರ್ಡ್ ಪಾಯಿಂಟ್ ಮೇಲೆ ಬೀಸಿದರು. ಈ ಸ್ಥಳದಲ್ಲಿ ಫೀಲ್ಡ್ ಮಾಡ್ತಾ ಇದ್ದ ಸಮೀರ್ ರಿಜ್ವಿ ಕ್ಯಾಚ್ ಕೈ ಚೆಲ್ಲಿದರು. ಇದರ ಸಂಪೂರ್ಣ ಲಾಭ ಪಡೆದು ಪೂರನ್ ಬ್ಯಾಟ್ ಮಾಡಿದರು.
ಉಳಿದಂತೆ ಲಕ್ನೋ ತಂಡದ ಪರ ಯಾವೊಬ್ಬ ಬ್ಯಾಟರ್ ಜೊತೆಯಾಟಗಳನ್ನು ನೀಡಲಿಲ್ಲ. ಒಂದು ಹಂತದಲ್ಲಿ ಲಕ್ನೋ ತಂಡ 240ರ ಆಸುಪಾಸಿನಲ್ಲಿ ರನ್ ಕಲೆ ಹಾಕುವ ಲೆಕ್ಕಾಚಾರವನ್ನು ಹಾಕಿಕೊಂಡಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಇದಕ್ಕೆ ಕಡಿವಾಣ ಹಾಕಿತು. ಮಧ್ಯಮ ಕ್ರಮಾಂಕದಲ್ಲಿ ಲಕ್ನೋ ಸೂಪರ್ ಪರ ಡೇವಿಡ್ ಮಿಲ್ಲರ್ 27 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ 3, ಕುಲ್‌ದೀಪ್ ಯಾದವ್ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications