
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳೂ ರದ್ದಾಗಿದೆ. ಒಲಿಂಪಿಕ್ಸ್‌ನಿಂದ ಹಿಡಿದು ಐಪಿಎಲ್ ವರೆಗೆ ಎಲ್ಲಾ ಕ್ರೀಡಾಕೂಟಗಳು ಮುಂದೂಡಿಕೆಯಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ) ಕೂಡ ಜುಲೈ 1ರ ವರೆಗಿನ ಎಲ್ಲಾ ಚಟುವಟಿಗೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಬೆಳವಣಿಗೆಯ ಕಾರಣದಿಂದಾಗಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಅರ್.ಅಶ್ವಿನ್ ಪ್ರಮುಖ ಒಪ್ಪಂದವೊಂದನ್ನು ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಜೊತೆಗೆ ಆರ್ ಅಶ್ವಿನ್ ಒಪ್ಪಂದವನ್ನು ಮಾಡಿಕೊಂಡಿದ್ದರು. ಯಾರ್ಕ್ ಶೈರ್ ಕ್ರಿಕೆಟ್ ಕ್ಲಬ್ ಜೊತೆಗೆ ಅಶ್ವಿನ್ ಒಡಂಬಡಿಕೆಯನ್ನು ಮಾಡಿಕೊಂಡಿದ್ದು ಈ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಕ್ಲಬ್ ತಿಳಿಸಿದೆ.
ಅಶ್ವಿನ್ ಜೊತೆಗೆ ಇನ್ನಿಬ್ಬರು ವಿದೇಶಿ ಆಟಗಾರರ ಒಪ್ಪಂದ ರದ್ದುಗೊಳ್ಳುತ್ತಿರುವುದರ ಬಗ್ಗೆ ಕ್ಲಬ್ ಸ್ಪಷ್ಟಪಡಿಸಿದೆ. ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಜೊತೆಗಿನ ಒಪ್ಪಂದಗಳೂ ರದ್ದಾಗಿದೆ ಎಂದು ಹೇಳಿದೆ.
ಈ ಆಟಗಾರರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ, ಸದ್ಯದ ಪರಿಸ್ಥಿತಿಯ ಬಗ್ಗೆ ಅವರು ಅರ್ಥ ಮಾಡಿಕೊಂಡಿದ್ದಾರೆ. ಅವರು ತುಂಬಾ ವೃತ್ತಿಪರರಾಗಿದ್ದಾರೆ ಎಂದು ಯಾರ್ಕ್‌ಶೈರ್ ಕ್ಲಬ್‌ನ ನಿರ್ದೇಶಕ ಮಾರ್ಟಿನ್ ಮಾಕ್ಸಾನ್ ಹೇಳಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ಅಶ್ವಿನ್ ಈ ಕ್ಲಬ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದ್ದರು. ಕ್ಲಬ್ ಪರವಾಗಿ ಬಹುತೇಕ ಪಂದ್ಯಗಳಲ್ಲಿ ಆಡಲು ಒಂಡಂಬಡಿಕೆಯಲ್ಲಿ ಸಹಿ ಮಾಡಿದ್ದರು. ಈ ಹಿಂದೆ ಎರಡು ಬಾರಿ ಕೌಂಟಿ ಕ್ರಿಕೆಟ್‌ನಲ್ಲಿ ಪಾಲ್ಗಂಡಿದ್ದರು ಆರ್ ಅಶ್ವಿನ್. ವರ್ಸೆಸ್ಟರ್ ಶೈರ್ ಮತ್ತು ನಾಟಿಂಗ್‌ಹ್ಯಾಮ್ ಶೈರ್ ಪರವಾಗಿ ಕಣಕ್ಕಿಳಿದಿದ್ದರು.