ಏಷ್ಯಾ ಕಪ್: ಶಹಝಾದ್ ಶತಕದಾಟ, ಭಾರತ vs ಅಫ್ಘಾನ್ ಪಂದ್ಯ ಟೈ

ದುಬೈ, ಸೆಪ್ಟೆಂಬರ್ 25: ಏಷ್ಯಾ ಕಪ್ 2018ರ ಸೂಪರ್ ಫೋರ್ 5ನೇ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಪಂದ್ಯ ಸಮಬಲಗೊಳಿಸಿಕೊಂಡಿದೆ. ಅಫ್ಘಾನ್ ಇನ್ನಿಂಗ್ಸ್ ವೇಳೆ ಮೊಹಮ್ಮದ್ ಶಹಝಾದ್ ಅವರು ಆಕರ್ಷಕ ಶತಕ ಚಚ್ಚಿ ಭಾರತ ಒತ್ತಡಕ್ಕೀಡಾಗುವಂತೆ ಮಾಡಿದ್ದರು.
ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನ್, ಮೊಹಮ್ಮದ್ ಶಹಝಾದ್ ಆಕರ್ಷಕ ಶತಕ (124) ಮತ್ತು ಮೊಹಮ್ಮದ್ ನಬಿ 64 ರನ್ ನೆರವಿನೊಂದಿಗೆ ಅಫ್ಘಾನಿಸ್ತಾನ ಭಾರತಕ್ಕೆ 253 ರನ್ ಗುರಿ ನೀಡಿದೆ. 50 ಓವರ್ ಮುಕ್ತಾಯಕ್ಕೆ ಅಫ್ಘಾನ್ 8 ವಿಕೆಟ್ ಕಳೆದು 252 ರನ್ ಪೇರಿಸಿತು.
ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ 60, ಅಂಬಾಟಿ ರಾಯುಡು 57 ಮತ್ತು ದಿನೇಶ್ ಕಾರ್ತಿಕ್ 44 ರನ್ ಸೇರಿಸಿ ರನ್ ಬಲ ತುಂಬಿದರು. ಆದರೆ ಈ ಮೂವರು ಔಟಾದ ಬಳಿಕ ಭಾರತದ ಯಾವ ಬ್ಯಾಟ್ಸ್ಮನ್ ಕೂಡ ಹೆಚ್ಚು ಹೊತ್ತು ವಿಕೆಟ್ ಕಾವಲು ನಿಲ್ಲದಿದ್ದರಿಂದ ಭಾರತ ಸೋಲುವ ಭೀತಿ ಎದುರಿಸಿತ್ತು.
ಕೊನೆಯ ಎರಡು ಓವರ್ ನಲ್ಲಿ ಪಂದ್ಯ ಬಾಲ್ ಟು ಬಾಲ್ ಹಂತಕ್ಕೆ ಬಂದಿತ್ತು. ಅಂತಿಮ ಓವರ್ ಹೊತ್ತಿಗಾಗಲೇ ಭಾರತ ಅಮೂಲ್ಯ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ಭಾರತದ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಆಲ್ ರೌಂಡರ್ ರವೀಂದ್ರ ಜಡೇಜಾ ತಂಡದ ಬೆಂಬಲಕ್ಕೆ ನಿಂತರು. ಭಾರತ ಅಂತಿಮವಾಗಿ 50 ಓವರ್ ಗೆ 9 ವಿಕೆಟ್ ಕಳೆದು 252 ರನ್ ಪೇರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.
ಆಡಿರುವ ನಾಲ್ಕು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವುದರಿಂದ ಭಾರತ ಈಗಾಗಲೇ ಫೈನಲ್ ಪ್ರವೇಶಿಸಿದೆ. ಹೀಗಾಗಿ ಸೆ. 25ರ ಪಂದ್ಯ ಭಾರತಕ್ಕೆ ಔಪಚಾರಿಕವಷ್ಟೆ. ಅತ್ತ ಅಫ್ಘಾನಿಸ್ತಾನಕ್ಕೂ ಈ ಪಂದ್ಯ ಔಪಚಾರಿಕವೇ. ಯಾಕೆಂದರೆ ಬಾಂಗ್ಲಾ ಮತ್ತು ಪಾಕಿಸ್ತಾನ ಎದುರು ಸೋಲು ಕಂಡಿರುವ ಅಫ್ಘಾನ್ ಟೂರ್ನಿಯಿಂದ ಹೊರ ಬಿದ್ದಿದೆ.
ಭಾರತ ತಂಡದಲ್ಲಿ ಸಣ್ಣ ಬದಲಾವಣೆಗಳಾಗಿದ್ದವು. ಶಿಖರ್ ಧವನ್, ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದು ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿ ವಹಿಸಿಕೊಂಡಿದ್ದರು. ಆರಂಭಿಕರಾಗಿ ಕೆಎಲ್ ರಾಹುಲ್ ಕಣಕ್ಕಿಳಿದಿದ್ದರು.
ಭಾರತ ತಂಡ: ಲೋಕೇಶ್ ರಾಹುಲ್, ಅಂಬಾಟಿ ರಾಯುಡು, ಮನೀಶ್ ಪಾಂಡೆ, ಎಂ.ಎಸ್. ಧೋನಿ (ಸಿ & ಡಬ್ಲ್ಯುಕೆ), ದಿನೇಶ್ ಕಾರ್ತಿಕ್, ಕೇದಾರ ಜಾಧವ್, ರವೀಂದ್ರ ಜಡೇಜಾ, ದೀಪಕ್ ಚಾಹರ್, ಕೆ ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಸಿದ್ದಾರ್ಥ್ ಕೌಲ್.
ಅಫ್ಘಾನಿಸ್ತಾನ ತಂಡ: ಮೊಹಮ್ಮದ್ ಷಾಝಾದ್ (ವಿ.ಕೆ), ಜಾವೇದ್ ಅಹ್ಮದಿ, ರಹ್ಮಾತ್ ಷಾ, ಹಶ್ಮಾತುಲ್ಲಾ ಶಾಹಿದ್ದಿ, ಅಸ್ಗರ್ ಅಫಘಾನ್ (ಸಿ), ನಜಿಬುಲ್ಲಾ ಝದ್ರನ್, ಮೊಹಮ್ಮದ್ ನಬಿ, ರಶೀದ್ ಖಾನ್, ಗುಲ್ಬಾದಿನ್ ನಾಯಿಬ್, ಅಫ್ತಾಬ್ ಅಲಮ್, ಮುಜೀಬ್ ಉರ್ ರಹಮಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications