IND vs PAK: ಸೂಪರ್ 4 ಪಂದ್ಯಕ್ಕೂ ಮುನ್ನ ಪಾಕ್ ಸಭೆ; ಪಾಂಡ್ಯ ಕಟ್ಟಿಹಾಕಲು ಬಾಬರ್ 3 ಯೋಜನೆ!

ಪ್ರಸ್ತುತ ಯುಎಇ ನೆಲದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸದ್ಯ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿವೆ. ಈ ಸುತ್ತಿನ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು, ಪಂದ್ಯ ಇಂದು ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿನ ಎರಡನೇ ಮುಖಾಮುಖಿಯ ಪಂದ್ಯವಾಗಿದ್ದು, ಗ್ರೂಪ್ ಹಂತದಲ್ಲಿ ನಡೆದಿದ್ದ ಪ್ರಥಮ ಮುಖಾಮುಖಿ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ಜಯ ಸಾಧಿಸಿತ್ತು.
ಇನ್ನು ಈ ಪಂದ್ಯದಲ್ಲಿಯೂ ಜಯ ಸಾಧಿಸುವುದರ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ತನ್ನ ಹಿಡಿತವನ್ನು ಮುಂದುವರೆಸುವ ಯೋಜನೆಯಲ್ಲಿದ್ದರೆ, ಪಾಕಿಸ್ತಾನ ಈ ಬಾರಿ ಟೀಮ್ ಇಂಡಿಯಾವನ್ನು ಕಟ್ಟಿಹಾಕಿ ಗ್ರೂಪ್ ಹಂತದಲ್ಲಿನ ಸೋಲಿನ ಪ್ರತೀಕಾರವನ್ನು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಅದರಲ್ಲಿಯೂ ಪಾಕಿಸ್ತಾನ ತಂಡಕ್ಕೆ ಗ್ರೂಪ್ ಹಂತದಲ್ಲಿನ ಪಂದ್ಯದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಈ ಪಂದ್ಯದಲ್ಲಿ ಕಟ್ಟಿ ಹಾಕಲು ಪಾಕಿಸ್ತಾನ ತನ್ನ ಸಭೆಯಲ್ಲಿ ವಿಶೇಷ ಚರ್ಚೆ ನಡೆಸಿರುವುದಾಗಿ ಪಾಕ್ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ.

ಪಾಂಡ್ಯ ಕಟ್ಟಿಹಾಕಲು 3 ಯೋಜನೆ ಹೆಣೆದ ಪಾಕ್
ಪ್ರಥಮ ಪಂದ್ಯದಲ್ಲಿ ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣಕರ್ತನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಈ ಪಂದ್ಯದಲ್ಲಿ ಕಟ್ಟಿಹಾಕಲು ಪಾಕಿಸ್ತಾನ ನಡೆಸಿದ ಸಭೆಯಲ್ಲಿ ಈ ಕೆಳಕಂಡ 3 ಯೋಜನೆಗಳ ಕುರಿತು ಚರ್ಚಿಸಲಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
• ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಪಾಲಿನ 4 ಓವರ್ ಗಳನ್ನು ಸಂಪೂರ್ಣವಾಗಿ ಎಸೆಯಲಿದ್ದು, ಈ ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಎಂದು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ.
• ಗ್ರೂಪ್ ಹಂತದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌನ್ಸರ್ ಎಸೆಯುವ ಮೂಲಕ ಒತ್ತಡ ಹೇರುತ್ತಿದ್ದರು, ಹೀಗಾಗಿ ಈ ಬಾರಿ ಆತನ ಬೌನ್ಸರ್ ಬಲೆಗೆ ಬೀಳದೆಯೇ ಬ್ಯಾಟ್ ಬೀಸಿ ವಿಕೆಟ್ ಕಾಯ್ದುಕೊಳ್ಳಿ ಎಂದು ಎಚ್ಚರಿಸಲಾಗಿದೆ.
• ಇನ್ನು ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ಮೂಲಕವೂ ಸಹ ಪಾಕಿಸ್ತಾನವನ್ನು ಕಾಡಿದ್ದ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ಶದಬ್ ಖಾನ್ ಸರಿಯಾದ ಬೌಲರ್ ಎಂದು ಪಾಕ್ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಪಾಂಡ್ಯ ಕಣಕ್ಕಿಳಿಯುವವರೆಗೂ ಶದಬ್ ಖಾನ್ ಓವರ್‌ಗಳನ್ನು ಬಾಕಿ ಉಳಿಸಿಕೊಳ್ಳಲು ಸಭೆಯಲ್ಲಿ ನಿಶ್ಚಯಿಸಲಾಗಿದೆ.

ಪ್ರಥಮ ಪಂದ್ಯದಲ್ಲಿ ಪಾಕ್ ಹೆಡೆಮುರಿಕಟ್ಟಿದ್ದ ಪಾಂಡ್ಯ
ಆಗಸ್ಟ್ 28ರಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಗ್ರೂಪ್ ಹಂತದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 25 ರನ್ ನೀಡಿ ಪಾಕ್ ತಂಡದ ಪ್ರಮುಖ 3 ವಿಕೆಟ್‍ಗಳನ್ನು ಕಬಳಿಸಿದ್ದ ಹಾರ್ದಿಕ್ ಪಾಂಡ್ಯ, ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 17 ಎಸೆತಗಳಲ್ಲಿ ಅಜೇಯ 33 ರನ್ ಚಚ್ಚಿ ಪಾಕ್ ತಂಡದ ಸೋಲಿಗೆ ಪ್ರಮುಖ ಕಾರಣಕರ್ತರಾಗಿದ್ದರು. ಅದರಲ್ಲಿಯೂ ಟೀಮ್ ಇಂಡಿಯಾಗೆ ಗೆಲ್ಲಲು ಅಂತಿಮ 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ಯಾವುದೇ ಒತ್ತಡವಿಲ್ಲದೇ ಸರಾಗವಾಗಿ ಸಿಕ್ಸರ್ ಚಚ್ಚಿದ್ದ ಹಾರ್ದಿಕ್ ಪಾಂಡ್ಯ ಪಾಕ್ ತಂಡಕ್ಕೆ ವಿಲನ್ ಆಗಿದ್ದರು.

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್.
ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಿಂದ ಹೊರಬಿದ್ದಿದ್ದು ಅಕ್ಷರ್ ಪಟೇಲ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸನೈನ್, ಹಸನ್ ಅಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications