IND vs PAK: ಭಾರತ ಪಂದ್ಯ ಗೆದ್ದ ನಂತರ ಜಯ್ ಶಾ ತ್ರಿವರ್ಣ ಧ್ವಜ ತಿರಸ್ಕರಿಸಿದ್ದರ ಹಿಂದಿನ ಕಾರಣ ಬಹಿರಂಗ!

ನಿನ್ನೆಯಷ್ಟೇ ( ಆಗಸ್ಟ್ 28 ) ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ 19.5 ಓವರ್‌ಗಳಲ್ಲಿ 147 ರನ್ ಕಲೆಹಾಕಿ ಆಲ್ ಔಟ್ ಆಗಿ ಟೀಂ ಇಂಡಿಯಾಗೆ ಗೆಲ್ಲಲು 148 ರನ್‌ಗಳ ಗುರಿಯನ್ನು ನೀಡಿತ್ತು. ಇನ್ನು ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿ 5 ವಿಕೆಟ್‍ಗಳ ರೋಚಕ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಪಂದ್ಯ ಅಂತಿಮ ಓವರ್ ತಲುಪಿದ ನಂತರ ರೋಚಕತೆ ಹೆಚ್ಚಾಗಿತ್ತು. ಎರಡೂ ತಂಡಗಳ ಪಾಳಯದಲ್ಲಿ ಮೌನ ಆವರಿಸಿತ್ತು. ಅಂತಿಮವಾಗಿ 3 ಎಸೆತಗಳಿಗೆ ಗೆಲ್ಲಲು 6 ರನ್ ಅಗತ್ಯವಿದ್ದಾಗ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್ ಬಾರಿಸುವುದರ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ಇನ್ನು ಪಂದ್ಯ ವೀಕ್ಷಿಸಲು ಮೈದಾನದಲ್ಲಿ ಹಾಜರಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪಂದ್ಯ ಮುಗಿಯುತ್ತಿದ್ದಂತೆಯೇ ಎದ್ದುನಿಂತು ಚಪ್ಪಾಳೆ ತಟ್ಟಿ ಗೆದ್ದ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದರು.
ಇದೇ ಸಂದರ್ಭದಲ್ಲಿ ಅಮಿತ್ ಶಾ ಬಳಿ ಇದ್ದ ವ್ಯಕ್ತಿ ಅಮಿತ್ ಶಾಗೆ ಭಾರತದ ಬಾವುಟವನ್ನು ನೀಡಲು ಯತ್ನಿಸಿದರು. ಆದರೆ ಚಪ್ಪಾಳೆ ತಟ್ಟುತ್ತಲೇ ಭಾರತ ತ್ರಿವರ್ಣ ಧ್ವಜವನ್ನು ಹಿಡಿಯಲು ಜಯ್ ಶಾ ನಿರಾಕರಿಸಿದ್ದರು. ಜಯ್ ಶಾ ಅವರ ಈ ನಡೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಜಯ್ ಶಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಬಿಸಿಸಿಐನ ಕಾರ್ಯದರ್ಶಿಯಾಗಿ, ಅದರಲ್ಲಿಯೂ ಗೃಹ ಸಚಿವ ಅಮಿತ್ ಶಾ ಅವರ ಪುತ್ರನಾಗಿ ಜಯ್ ಶಾ ಅವರು ರಾಷ್ಟ್ರಧ್ವಜವನ್ನು ತಿರಸ್ಕರಿಸಿದ್ದು ಧ್ವಜಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಕಿಡಿಕಾರಿದ್ದರು. ಆದರೆ ಜಯ್ ಶಾ ಈ ರೀತಿ ರಾಷ್ಟ್ರಧ್ವಜವನ್ನು ತಿರಸ್ಕರಿಸಲು ಬೇರೆಯದ್ದೇ ಕಾರಣವಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ.

ಜಯ್ ಶಾ ತ್ರಿವರ್ಣ ಧ್ವಜ ತಿರಸ್ಕರಿಸಿದ್ದು ಈ ಕಾರಣಕ್ಕೆ!
ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಏಷ್ಯಾ ಕ್ರಿಕೆಟ್ ಕೌನ್ಸಿಲ್ ( ಎಸಿಸಿ ) ಅಧ್ಯಕ್ಷ ಕೂಡ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ ನಿಯಮದ ಪ್ರಕಾರ ಕೌನ್ಸಿಲ್‌ನ ಅಧ್ಯಕ್ಷ ಹುದ್ದೆಯಲ್ಲಿರುವವರು ಎಲ್ಲಾ ತಂಡಗಳನ್ನು ಸಮನಾಗಿ ಕಾಣಬೇಕು ಹಾಗೂ ತಂಡವೊಂದಕ್ಕೆ ಪ್ರತ್ಯೇಕ ಬೆಂಬಲವನ್ನು ನೀಡುವಂತಿಲ್ಲ. ಹೀಗಾಗಿಯೇ ಜಯ್ ಶಾ ಭಾರತದ ಧ್ವಜವನ್ನು ಪಂದ್ಯದ ನಂತರ ತಿರಸ್ಕರಿಸಿದ್ದರು.

ಅಬ್ಬರಿಸಿದ ಹಾರ್ದಿಕ್ ಪಾಂಡ್ಯ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಆದರೆ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಸಂಪೂರ್ಣ ಆಲ್ ರೌಂಡರ್ ಆಟವನ್ನಾಡಿದ ಹಾರ್ದಿಕ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 3 ವಿಕೆಟ್ ಪಡೆಯುವುದರ ಜತೆಗೆ ಅಜೇಯ 33 ರನ್‌ಗಳನ್ನು ಚಚ್ಚಿದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾದರು.

ಟೀಮ್ ಇಂಡಿಯಾದ ಮುಂದಿನ ಪಂದ್ಯ ಯಾವಾಗ?
ಸದ್ಯ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿ ಮುಂದಿನ ಸುತ್ತಿನ ಹಾದಿಯನ್ನು ಸುಲಭ ಮಾಡಿಕೊಂಡಿರುವ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡದ ವಿರುದ್ಧ ಆಗಸ್ಟ್ 31ರ ಗುರುವಾರದಂದು ಸಂಜೆ 7.30ಕ್ಕೆ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಮುಂದಿನ ಸುತ್ತನ್ನು ಪ್ರವೇಶಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications